ಬದುಕಿಗೆ ಅತ್ಯಗತ್ಯವಾಗಿ ಬೇಕಾದ ವಸ್ತುಗಳಲ್ಲಿ ಶುದ್ಧ ನೀರಿಗೆ ಪ್ರಮುಖ ಸ್ಥಾನ. ಬ್ಯಾಂಕಿನ ಖಾತೆಯನ್ನು ತುಂಬಿಸುವಷ್ಟು ಸಂಬಳ ಬಂದರೂ ಬಾಯಾರಿದಾಗ ಹಣವನ್ನೇನು ಲೋಟದೊಳಕ್ಕೆ ಹಾಕಿ ಕುಡಿಯಲಾಗುತ್ತದೆಯೇ?

ಸಂಬಳವೇನೋ ಹಾಗೂ ಹೀಗೂ ಸಿಕ್ಕರೂ ಈಗ ಬಹಳಷ್ಟು ಕಡೆಗಳಲ್ಲಿ ನೀರು ಸಿಗುವುದಿಲ್ಲ, ಸಿಕ್ಕರೂ ಮಾಲಿನ್ಯದ ಭಯದಿಂದ ಅದನ್ನು ಬಳಸಲು ಹಿಂದೆಮುಂದೆ ನೋಡುವಂತಾಗುತ್ತದೆ. ಹಾಗೆಂದು ನೀರು ಬಳಸದೆಯೇ ಇದ್ದುಬಿಡುವಂತೆಯೂ ಇಲ್ಲ. ನೀರನ್ನು ಎಷ್ಟೇ ಬೇಜವಾಬ್ದಾರಿಯಿಂದ ಬಳಸಿದರೂ, ನೀರಿನ ಮೂಲಗಳಿಗೆ ಎಷ್ಟೇ ಮಾಲಿನ್ಯಕಾರಕಗಳನ್ನು ಸೇರಿಸಿದರೂ ನಮಗೆ ಮಾತ್ರ ಕುಡಿಯಲು ಶುದ್ಧ ನೀರು ಬೇಕು.

"ಅಷ್ಟೇ ತಾನೆ, ಜಲಮಾಲಿನ್ಯ ತಪ್ಪಿಸಿಬಿಡೋಣ ಬಿಡಿ!" ಎಂದು ಕನಸಿನಲ್ಲೂ ಹೇಳುವ ಪರಿಸ್ಥಿತಿಯಲ್ಲಿ ನಾವಿಲ್ಲ. ಹಾಗಾಗಿ ನೀರನ್ನು ಶುದ್ಧೀಕರಿಸುವ ಯಂತ್ರಗಳು (ವಾಟರ್ ಪ್ಯೂರಿಫೈಯರ್) ಈಗ ಎಲ್ಲರಿಗೂ ಅಗತ್ಯವೆಂದು ತೋರುತ್ತಿವೆ.

ಹಲವಾರು ಬಗೆಯ ವಾಟರ್ ಪ್ಯೂರಿಫೈಯರ್‌ಗಳನ್ನು ನಾವು ಮಾರುಕಟ್ಟೆಯಲ್ಲಿ ನೋಡಬಹುದು. ಈ ಪೈಕಿ ಮೊದಲನೆಯ ವಿಧದ ಯಂತ್ರಗಳು ನೀರನ್ನು ಶುದ್ಧಮಾಡಲು ಪಟೂಕರಿಸಿದ (ಆಕ್ಟಿವೇಟೆಡ್) ಕಾರ್ಬನ್ ಅನ್ನು ಪ್ರಮುಖವಾಗಿ ಬಳಸುತ್ತವೆ. ಅಂದರೆ, ಇದ್ದಿಲಿನಲ್ಲಿರುವ ಸೂಕ್ಷ್ಮ ಕಾರ್ಬನ್ ಕಣಗಳನ್ನು ಬೆಳ್ಳಿಯ ಅಣುಗಳಿಂದ ಆವೇಶಿಸಿ (ಚಾರ್ಜ್ ಮಾಡಿ) ಇಲ್ಲಿ ಫಿಲ್ಟರಿನಂತೆ ಬಳಸಲಾಗುತ್ತದೆ. ಕೆಲವೇ ಮೈಕ್ರಾನುಗಳಷ್ಟು ಸಣ್ಣ ಮಾಲಿನ್ಯಕಾರಕಗಳನ್ನೂ ಪ್ರತ್ಯೇಕಿಸಬಲ್ಲ ಈ ಫಿಲ್ಟರುಗಳು ಹಲವು ಹಾನಿಕಾರಕ ರಾಸಾಯನಿಕಗಳನ್ನು ನೀರಿನಿಂದ ಹೊರತೆಗೆಯಬಲ್ಲವು. ಈ ಫಿಲ್ಟರಿನ ಜೊತೆಗೆ ಕ್ಲೋರಿನ್ ಇತ್ಯಾದಿಗಳನ್ನೂ ಬಳಸುವ ಮಾದರಿಗಳು ಮಾರುಕಟ್ಟೆಯಲ್ಲಿವೆ.

ಈ ಬಗೆಯ ಪ್ಯೂರಿಫೈಯರ್ ಕೆಲಸಮಾಡಲು ವಿದ್ಯುತ್ ಅಗತ್ಯವಿಲ್ಲ. ಶುದ್ಧೀಕರಿಸಿದ ನೀರನ್ನು ಯಂತ್ರದಲ್ಲೇ ಶೇಖರಿಸಿಡುವ ವ್ಯವಸ್ಥೆ ಇರುವುದರಿಂದ ಬೇಕೆಂದ ತಕ್ಷಣ ನೀರು ಸಿಗುತ್ತದೆ, ಸದಾಕಾಲ ನಲ್ಲಿಯ ನೀರನ್ನು ಕಾಯಬೇಕಾಗಿಯೂ ಇಲ್ಲ. ಇಷ್ಟರ ಮೇಲೆ ಇವುಗಳ ಬೆಲೆಯೂ ಕಡಿಮೆ. ಹೆಚ್ಚಿನಪ್ರಮಾಣದ ಜಲಮಾಲಿನ್ಯವಿಲ್ಲದ ಪ್ರದೇಶಗಳಲ್ಲಿ, ವಿದ್ಯುತ್ ಹಾಗೂ ನೀರು ಪೂರೈಕೆಯ ಸಮಸ್ಯೆಯಿರುವ ಕಡೆಗಳಲ್ಲಿ ಬಳಸಲು ಇವು ಉತ್ತಮ ಆಯ್ಕೆ ಎಂದು ಹೇಳಬಹುದು. ಫಿಲ್ಟರ್ ಸಾಮರ್ಥ್ಯದ ಮೇಲೆ (ಉದಾ: ೧೦ ಮೈಕ್ರಾನ್ ಫಿಲ್ಟರಿಗಿಂತ ೦.೫ ಮೈಕ್ರಾನ್ ಫಿಲ್ಟರ್ ಉತ್ತಮ) ಹೆಚ್ಚು ಸಮರ್ಥವಾದ ಮಾದರಿಯನ್ನು ಆರಿಸಿಕೊಳ್ಳುವುದೂ ಸಾಧ್ಯ.

ಇನ್ನೊಂದು ವಿಧ ಅಲ್ಟ್ರಾವಯೊಲೆಟ್ (ಯುವಿ) ಪ್ಯೂರಿಫೈಯರುಗಳದು. ವಿದ್ಯುತ್ ಸಹಾಯದಿಂದ ಕೆಲಸಮಾಡುವ ಈ ಯಂತ್ರಗಳು ಅತಿನೇರಳೆ (ಅಲ್ಟ್ರಾವಯೊಲೆಟ್) ಕಿರಣಗಳನ್ನು ಹಾಯಿಸಿ ನೀರಿನಲ್ಲಿರುವ ಕಲ್ಮಷಗಳನ್ನು ನಾಶಪಡಿಸುತ್ತವೆ. ಆರ್ಸೆನಿಕ್, ಕಬ್ಬಿಣ ಮುಂತಾದ ಕೆಲವನ್ನು ಹೊರತುಪಡಿಸಿ ಬಹುತೇಕ ಮಾಲಿನ್ಯಕಾರಕಗಳನ್ನು ಹಾಗೂ ಹಾನಿಕಾರಕ ಸೂಕ್ಷ್ಮಜೀವಿಗಳನ್ನು ಈ ಬಗೆಯ ಯಂತ್ರಗಳು ನಿವಾರಿಸಬಲ್ಲವು. ವಿದ್ಯುತ್ ಸಂಪರ್ಕ ಬೇಕೆನ್ನುವುದು ನಿಜವಾದರೂ ಈ ಯಂತ್ರಗಳು ಹೆಚ್ಚಿನ ಪ್ರಮಾಣದ ವಿದ್ಯುತ್ತನ್ನೇನೂ ಬಳಸುವುದಿಲ್ಲ.

[ಜಾಹೀರಾತು] ಅಮೆಜಾನ್ ಇಂಡಿಯಾದಿಂದ ವಾಟರ್ ಪ್ಯೂರಿಫೈಯರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ!

ಆದರೆ ಕೆಲವೇ ಮಾದರಿಗಳನ್ನು ಹೊರತುಪಡಿಸಿ ಬಹುತೇಕ ಯುವಿ ಪ್ಯೂರಿಫೈಯರುಗಳಲ್ಲಿ ಶುದ್ಧೀಕರಿಸಿದ ನೀರನ್ನು ಶೇಖರಿಸಿಟ್ಟುಕೊಳ್ಳುವ ವ್ಯವಸ್ಥೆ ಇರುವುದಿಲ್ಲ. ಅಲ್ಲದೆ ಇವನ್ನು ನಲ್ಲಿಗೆ ನೇರವಾಗಿ ಜೋಡಿಸಬೇಕಾದ್ದೂ ಅನಿವಾರ್ಯ. ಹಾಗಾಗಿ ನೀರು ನಿಂತುಹೋದ ಅಥವಾ ಕರೆಂಟಿಲ್ಲದ ಸಂದರ್ಭಗಳಲ್ಲಿ ಇವನ್ನು ನೆಚ್ಚಿಕೊಳ್ಳುವುದು ಕಷ್ಟ; ನೀರನ್ನು ಪಾತ್ರೆಯಲ್ಲೋ ಬಾಟಲುಗಳಲ್ಲೋ ಹಿಡಿದಿಡುವುದು ಅನಿವಾರ್ಯವಾಗುತ್ತದೆ. ಆಕ್ಟಿವೇಟೆಡ್ ಕಾರ್ಬನ್ ಬಳಸುವ ಮಾದರಿಗಳಿಗೆ ಹೋಲಿಸಿದರೆ ಯುವಿ ಪ್ಯೂರಿಫೈಯರುಗಳು ದುಬಾರಿಯೇ ಎನ್ನಬಹುದು.

ನೀರು ಶುದ್ಧೀಕರಿಸುವ ಯಂತ್ರಗಳ ಪೈಕಿ ಅತ್ಯಂತ ದುಬಾರಿಯಾದವು ರಿವರ್ಸ್ ಆಸ್ಮಾಸಿಸ್ (ಆರ್‌ಒ) ತಂತ್ರಜ್ಞಾನ ಬಳಸುವ ಪ್ಯೂರಿಫೈಯರುಗಳು. ನೀರನ್ನು ಅರೆಪಾರಕ ಪೊರೆಯೊಂದರ (ಸೆಮಿ-ಪರ್ಮಿಯಬಲ್ ಮೆಂಬ್ರೇನ್) ಮೂಲಕ ಹಾಯಿಸಿ ಅದರಲ್ಲಿರುವ ಕಲ್ಮಷಗಳನ್ನು ಪ್ರತ್ಯೇಕಿಸುವ ತಂತ್ರವನ್ನು ಇವು ಬಳಸುತ್ತವೆ. ನೀರಿನ ಅಣುಗಳನ್ನಷ್ಟೆ ತನ್ನ ಮೂಲಕ ಹಾಯಗೊಡುವ ಈ ಪೊರೆ ಮಾಲಿನ್ಯಕಾರಕ ರಾಸಾಯನಿಕಗಳನ್ನು ತಡೆದುಬಿಡುತ್ತದೆ. ಹಾಗಾಗಿಯೇ ಈ ಪೊರೆಯ ಮೂಲಕ ಹಾದು ಬಂದ ನೀರಿನಲ್ಲಿ ಬಹುತೇಕ ಕಲ್ಮಷಗಳ ನಿವಾರಣೆಯಾಗಿರುತ್ತದೆ.

ಬ್ಯಾಕ್ಟೀರಿಯಾ-ವೈರಸ್ ಇತ್ಯಾದಿಗಳನ್ನು ನಿವಾರಿಸುವಲ್ಲಿ ಯುವಿ ಪ್ಯೂರಿಫೈಯರುಗಳಷ್ಟು ಶಕ್ತವಲ್ಲವೆಂದು ಹೇಳಲಾಗುತ್ತದಾದರೂ ನೀರಿನಲ್ಲಿರುವ ಬಹುತೇಕ ಎಲ್ಲ ಹಾನಿಕಾರಕ ರಾಸಾಯನಿಕಗಳನ್ನೂ ಇವು ನಿವಾರಿಸಬಲ್ಲವು, ಮಾಲಿನ್ಯಕಾರಕಗಳಿಂದಾಗಿ ನೀರಿಗೆ ಬರುವ ಅಡ್ಡವಾಸನೆ ಅಥವಾ ರುಚಿಯನ್ನೂ ತೊಲಗಿಸಬಲ್ಲವು. ಅಷ್ಟೇ ಅಲ್ಲ, ನೀರಿನ ಗಡಸುತನವನ್ನೂ ಹೋಗಲಾಡಿಸಬಲ್ಲವು.

ಆದರೆ ಈ ಪ್ಯೂರಿಫೈಯರುಗಳಿಗೆ ನಾವು ಊಡಿಸುವ ನೀರಿನ ಒಂದು ಅಂಶ ವ್ಯರ್ಥವಾಗುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪೊರೆಯ ಮೂಲಕ ಹಾಯಲಾಗದ ರಾಸಾಯನಿಕಗಳು ಅಲ್ಲೇ ಕಟ್ಟಿಕೊಳ್ಳಬಾರದಲ್ಲ, ಹಾಗಾಗಿ ಪೊರೆಯನ್ನು ಸ್ವಯಂಚಾಲಿತವಾಗಿ ತೊಳೆದು ಕಲ್ಮಷಗಳನ್ನೆಲ್ಲ ಹೊರಹಾಕಲು ಈ ನೀರು ಬಳಕೆಯಾಗುತ್ತದೆ. ಕುಡಿಯುವ ನೀರಿನ ಲಭ್ಯತೆಯೇ ಕಡಿಮೆಯಿರುವ ಕಡೆಗಳಲ್ಲಿ, ದೂರದೂರುಗಳಿಂದ ನೀರನ್ನು ಪಂಪುಮಾಡಿ ತರಲಾಗುವ ಬೆಂಗಳೂರಿನಂತಹ ಪ್ರದೇಶಗಳಲ್ಲಿ ನೀರನ್ನು ಹೀಗೆ ವ್ಯರ್ಥಮಾಡುವುದು ಕಷ್ಟ (ಕೆಲವರು ಆರ್‌ಒ ಪ್ಯೂರಿಫೈಯರಿನಿಂದ ಹೊರಬರುವ ವ್ಯರ್ಥನೀರನ್ನು ಇತರ ಉಪಯೋಗಗಳಿಗೆ ಬಳಸುವ ಅಭ್ಯಾಸ ಇಟ್ಟುಕೊಂಡಿದ್ದಾರೆ). ಹಾಗಾಗಿ ತೀವ್ರ ಮಾಲಿನ್ಯ, ಗಡಸುತನ, ಅಡ್ಡವಾಸನೆ ಅಥವಾ ರುಚಿಯ ಸಮಸ್ಯೆಗಳಿಲ್ಲದ ಕಡೆ ಬಹುಶಃ ಆರ್‌ಒ ಫಿಲ್ಟರುಗಳ ಅಗತ್ಯ ಬರುವುದಿಲ್ಲ ಎಂದೇ ಹೇಳಬಹುದು.

ನೀರಿನ ಗುಣಮಟ್ಟದ ಪರೀಕ್ಷೆ ಮಾಡಿಸಿ ಫಲಿತಾಂಶಕ್ಕೆ ಅನುಗುಣವಾದ ಪ್ಯೂರಿಫೈಯರ್ ಬಳಸಲು ಇಷ್ಟವಿರುವವರು ನಮ್ಮ ರಾಜ್ಯದಲ್ಲಿರುವ ಅಂತರ್ಜಲ ಪರೀಕ್ಷಾ ಕೇಂದ್ರಗಳನ್ನು (ಗ್ರೌಂಡ್‌ವಾಟರ್ ಟೆಸ್ಟಿಂಗ್ ಲ್ಯಾಬ್) ಗೂಗಲ್‌ನಲ್ಲಿ ಹುಡುಕಬಹುದು. ಅದೇನೂ ಬೇಡ ಎನ್ನುವವರೂ ಒಂದು ಕೆಲಸ ಮಾಡಬೇಕು: ನೀರನ್ನು ಪೋಲುಮಾಡುವ, ಅಂತರ್ಜಲ ಮೂಲಗಳಿಗೆ ನಿರ್ದಾಕ್ಷಿಣ್ಯವಾಗಿ ಕಲ್ಮಷಗಳನ್ನು ಸೇರಿಸುವ ಮುನ್ನ ನಮ್ಮ ಭವಿಷ್ಯದ ಬಗ್ಗೆ ಒಂದೇ ಒಂದು ಸಾರಿ ಯೋಚಿಸಿದರೆ ನೀರಿನ ಸಮಸ್ಯೆಗೆ ನಿಧಾನವಾಗಿಯಾದರೂ ಪರಿಹಾರ ಕಾಣಿಸಬಹುದು!

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

0 ಪ್ರತಿಕ್ರಿಯೆಗಳು:

Post a Comment