ಈಚಿನ ವರ್ಷಗಳಲ್ಲಿ ಟ್ಯಾಬ್ಲೆಟ್ ಕಂಪ್ಯೂಟರುಗಳು ಸಾಕಷ್ಟು ಜನಪ್ರಿಯತೆ ಕಂಡಿವೆ. ಇಷ್ಟೆಲ್ಲ ಹೆಸರುಮಾಡಿವೆಯಲ್ಲ, ನಾವೂ ಒಂದನ್ನು ಕೊಂಡು ಬಳಸಿಬಿಡೋಣ ಎಂದು ಹೊರಟಾಗ ಮಾರುಕಟ್ಟೆಯಲ್ಲಿರುವ ಟ್ಯಾಬ್ಲೆಟ್‌ಗಳ ವೈವಿಧ್ಯ ನಮ್ಮಲ್ಲಿ ಗೊಂದಲಹುಟ್ಟಿಸುವುದು ಗ್ಯಾರಂಟಿ. ಇಂತಹ ಸಂದರ್ಭದಲ್ಲಿ ಟ್ಯಾಬ್ಲೆಟ್ ಕೊಳ್ಳುವಾಗ ನಾವು ಗಮನಿಸಬೇಕಾದ ಕೆಲವು ಅಂಶಗಳು ಇಲ್ಲಿವೆ.

ಟ್ಯಾಬ್ಲೆಟ್ ಕಂಪ್ಯೂಟರಿನಲ್ಲಿ ಯಾವೆಲ್ಲ ಬಗೆಯ ಸಂಪರ್ಕ ಸೌಲಭ್ಯಗಳಿವೆ ಎನ್ನುವ ಅಂಶ ಅವುಗಳ ಖರೀದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಕೊಳ್ಳುವ ಟ್ಯಾಬ್ಲೆಟ್ ಅಂತರಜಾಲ ಸಂಪರ್ಕಕ್ಕೆ 'ವೈ-ಫಿ'ಯನ್ನಷ್ಟೇ ಅವಲಂಬಿಸುವುದಾದರೆ ಆ ಸೌಲಭ್ಯವಿಲ್ಲದ ಕಡೆ (ಉದಾ: ಪ್ರಯಾಣದ ಸಂದರ್ಭದಲ್ಲಿ) ಟ್ಯಾಬ್ಲೆಟ್ ಬಳಕೆ ಕಷ್ಟವಾಗಬಹುದು. ವೈ-ಫಿ ಜೊತೆಗೆ ಸಿಮ್ ಬಳಸುವ ಸೌಲಭ್ಯವೂ ಇದ್ದರೆ ವೈ-ಫಿ ಇಲ್ಲದ ಕಡೆಯಲ್ಲಿ ಮೊಬೈಲ್ ಜಾಲದ ಮೂಲಕ ಅಂತರಜಾಲ ಸಂಪರ್ಕ ಪಡೆದುಕೊಳ್ಳುವುದು ಸಾಧ್ಯ. ೨ಜಿ, ೩ಜಿ ಹಾಗೂ ಇದೀಗ ಬಳಕೆಗೆ ಬರುತ್ತಿರುವ ೪ಜಿ - ಈ ಮೂರೂ ಬಗೆಯ ಮೊಬೈಲ್ ಜಾಲಗಳಲ್ಲಿ ಕೆಲಸಮಾಡುವ ಟ್ಯಾಬ್ಲೆಟ್ ಕಂಪ್ಯೂಟರುಗಳು ಇದೀಗ ಮಾರುಕಟ್ಟೆಯಲ್ಲಿವೆ. ಇಂತಹ ಕೆಲವು ಟ್ಯಾಬ್ಲೆಟ್ಟುಗಳನ್ನು ದೂರವಾಣಿಯಂತೆ ಬಳಸಿ ಕರೆಮಾಡುವುದು ಕೂಡ ಸಾಧ್ಯ!

ಆದರೆ ಬಹಳಷ್ಟು ಸಾರಿ ವೈ-ಫಿ ಬಳಸುವ ಟ್ಯಾಬ್ಲೆಟ್ಟುಗಳು ಸಿಮ್ ಸೌಲಭ್ಯವಿರುವ ಟ್ಯಾಬ್ಲೆಟ್‌ಗಳಿಗಿಂತ ಕಡಿಮೆಬೆಲೆಗೆ ದೊರಕುತ್ತವೆ. ಟ್ಯಾಬ್ಲೆಟ್ಟಿನಲ್ಲಿ ೩ಜಿ ಸೌಲಭ್ಯಕ್ಕೆ ಹೆಚ್ಚು ಹಣ ಕೊಡಲು ಸಿದ್ಧರಿಲ್ಲ ಎನ್ನುವವರು ತಮ್ಮ ಮೊಬೈಲಿನಲ್ಲಿ ವೈ-ಫಿ ಹಾಟ್‌ಸ್ಪಾಟ್ ಸೌಲಭ್ಯವಿದ್ದರೆ ತಮ್ಮ ಟ್ಯಾಬ್ಲೆಟ್ಟನ್ನು ಅದರ ಜೊತೆಯಲ್ಲಿ ಬಳಸಬಹುದು. ಆದರೆ ಅಂತಹ ಸಂದರ್ಭದಲ್ಲಿ ಟ್ಯಾಬ್ಲೆಟ್ ಯಾವಾಗಲೂ ಮೊಬೈಲಿನ ಆಸುಪಾಸಿನಲ್ಲೇ ಇರಬೇಕಾಗುತ್ತದೆ ಎನ್ನುವುದೊಂದೇ ಕೊರತೆ.


ಟ್ಯಾಬ್ಲೆಟ್ಟಿನಲ್ಲಿರುವ ಕ್ಯಾಮೆರಾದ ಸಾಮರ್ಥ್ಯ, ನಾವು ಗಮನಿಸಬಹುದಾದ ಇನ್ನೊಂದು ಅಂಶ. ಬಹುತೇಕ ಟ್ಯಾಬ್ಲೆಟ್ಟುಗಳಲ್ಲಿ ಎರಡು ಕ್ಯಾಮೆರಾಗಳಿರುತ್ತವೆ - ವೀಡಿಯೋ ಚಾಟಿಂಗ್‌ಗಾಗಿ ಮುಂದಿನ ಕ್ಯಾಮೆರಾ, ಚಿತ್ರಗಳನ್ನು ಸೆರೆಹಿಡಿಯಲು ಹಿಂಭಾಗದ ಕ್ಯಾಮೆರಾ. ನಾವು ಟ್ಯಾಬ್ಲೆಟ್ಟನ್ನು ಕ್ಯಾಮೆರಾದಂತೆ ಬಳಸುತ್ತೇವೆಯೋ ಇಲ್ಲವೋ ಎನ್ನುವುದರ ಆಧಾರದ ಮೇಲೆ ಹಿಂಭಾಗದ ಕ್ಯಾಮೆರಾ ಗುಣಮಟ್ಟ ಎಷ್ಟಿದ್ದರೆ ಸಾಕು ಎಂದು ನಿರ್ಧರಿಸಿಕೊಳ್ಳಬಹುದು. ಟ್ಯಾಬ್ಲೆಟ್ ಬಳಸಿ ಫೋಟೋಗ್ರಫಿಯೆ? ಖಂಡಿತಾ ಇಲ್ಲ ಎನ್ನುವವರು ತಮ್ಮ ಖರೀದಿಯ ಅಂತಿಮ ಪಟ್ಟಿಯಲ್ಲಿ ಹಿಂಭಾಗದ ಕ್ಯಾಮೆರಾ ಇಲ್ಲದ ಟ್ಯಾಬ್ಲೆಟ್ಟನ್ನೂ ಪರಿಗಣಿಸಬಹುದು. ಇನ್ನು ಮುಂಭಾಗದ ಕ್ಯಾಮೆರಾ ವೀಡಿಯೋ ಚಾಟಿಂಗ್ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ಮೂಡಿಸುವಂತಿದ್ದರೆ ಸಾಕು.

ನಾವು ಕೊಳ್ಳಲು ಹೊರಟಿರುವ ಟ್ಯಾಬ್ಲೆಟ್ ಯಾವ ಕಾರ್ಯಾಚರಣ ವ್ಯವಸ್ಥೆಯನ್ನು (ಆಪರೇಟಿಂಗ್ ಸಿಸ್ಟಂ) ಬಳಸುತ್ತದೆ ಎನ್ನುವ ಅಂಶ ಕೂಡ ಮುಖ್ಯ. ಆಪಲ್‌ನ ಐಓಎಸ್, ಗೂಗಲ್‌ನ ಆಂಡ್ರಾಯ್ಡ್ ಹಾಗೂ ಮೈಕ್ರೋಸಾಫ್ಟ್ ವಿಂಡೋಸ್ - ಇವು ಸದ್ಯ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಕಾರ್ಯಾಚರಣ ವ್ಯವಸ್ಥೆಗಳು. ನಮ್ಮ ಆಯ್ಕೆಯ ಟ್ಯಾಬ್ಲೆಟ್‌ನಲ್ಲಿ ಬಳಸಲು ಎಷ್ಟು ತಂತ್ರಾಂಶಗಳು (ಆಪ್) ದೊರಕುತ್ತವೆ, ಆಟ-ಪುಸ್ತಕ-ವೀಡಿಯೋ ಇತ್ಯಾದಿಗಳ ಲಭ್ಯತೆ ಹೇಗಿದೆ, ಅದಕ್ಕೆಲ್ಲ ನಾವು ಖರ್ಚುಮಾಡಬೇಕಾದ ಹಣ ಎಷ್ಟು ಎನ್ನುವುದು ಕೂಡ ಪರಿಗಣಿಸಬೇಕಾದ ಅಂಶ. ಇವನ್ನೆಲ್ಲ ಬಳಸುವಾಗ ಟ್ಯಾಬ್ಲೆಟ್ಟಿನ ಬ್ಯಾಟರಿ ಎಷ್ಟುಬೇಗ ಖರ್ಚಾಗುತ್ತದೆ, ಅದನ್ನು ಮತ್ತೆ ಚಾರ್ಜ್ ಮಾಡಲು ಎಷ್ಟು ಸಮಯ ಬೇಕು ಎನ್ನುವುದನ್ನೂ ಗಮನಿಸಬೇಕು.

ಟ್ಯಾಬ್ಲೆಟ್ ಬಳಕೆಯ ಉದ್ದೇಶದ ಕುರಿತು ಮತ್ತೊಮ್ಮೆ ಗಮನಹರಿಸುವುದೂ ಒಳ್ಳೆಯದೇ. ಇ-ಪುಸ್ತಕಗಳನ್ನು ಓದುವ ಒಂದೇ ಉದ್ದೇಶಕ್ಕಾಗಿ ಟ್ಯಾಬ್ಲೆಟ್ ಕೊಳ್ಳುವುದಾದರೆ ಅದರ ಬದಲು ಇ-ಬುಕ್ ರೀಡರ್ (ಉದಾ: ಅಮೆಜಾನ್ ಕಿಂಡಲ್) ಕೊಳ್ಳುವುದೇ ಒಳ್ಳೆಯ ನಿರ್ಧಾರವಾಗಬಲ್ಲದು. ಕಣ್ಣಿಗೆ ಶ್ರಮವಾಗದಂತಹ ಓದಿಗೆ ಹೇಳಿ ಮಾಡಿಸಿದ ಪರಿಕರಗಳು ಅವು. ಅಷ್ಟೇ ಅಲ್ಲ, ಅವುಗಳ ಬ್ಯಾಟರಿ ಬಾಳಿಕೆಯೂ ಹೆಚ್ಚು, ಟ್ಯಾಬ್ಲೆಟ್ಟುಗಳಿಗೆ ಹೋಲಿಸಿದರೆ ಪ್ರಾರಂಭಿಕ ಆವೃತ್ತಿಗಳ ಬೆಲೆಯೂ ಕೊಂಚ ಕಡಿಮೆ. ಆದರೆ ಸಾಮಾನ್ಯವಾಗಿ ಟ್ಯಾಬ್ಲೆಟ್ ಕಂಪ್ಯೂಟರಿನಲ್ಲಿರುವ ಎಲ್ಲ ಸೌಲಭ್ಯಗಳೂ ಇ-ಬುಕ್ ರೀಡರುಗಳಲ್ಲಿ ಇರುವುದಿಲ್ಲ ಎಂದು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು.

ಇದನ್ನೆಲ್ಲ ಗಮನಿಸಿ ಸೂಕ್ತ ಟ್ಯಾಬ್ಲೆಟ್ ಆಯ್ಕೆ ಮಾಡಿಕೊಳ್ಳುವಲ್ಲಿ ನಮ್ಮ ಬಜೆಟ್ ಕೂಡ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಬಹುದು. ನಮ್ಮ ಕನಸಿನ ಟ್ಯಾಬ್ಲೆಟ್‌ನಲ್ಲಿರಬೇಕಾದ ವೈಶಿಷ್ಟ್ಯಗಳನ್ನು ಆರಿಸಿಕೊಳ್ಳುವ ಮುನ್ನ ಅದಕ್ಕಾಗಿ ನಾವೆಷ್ಟು ಖರ್ಚುಮಾಡಬಲ್ಲೆವು ಎಂದು ನಿರ್ಧರಿಸಿಕೊಳ್ಳಬೇಕಾದ್ದು ಅಗತ್ಯವಷ್ಟೇ ಅಲ್ಲ, ಅನಿವಾರ್ಯವೂ ಹೌದು.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

0 ಪ್ರತಿಕ್ರಿಯೆಗಳು:

Post a Comment