ಬಟ್ಟೆ ಒಗೆಯುವುದು ಕಷ್ಟದ ಕೆಲಸ. ಹಾಗಾಗಿ ನಾವೆಲ್ಲ ವಾಶಿಂಗ್ ಮಶೀನ್ ಮೊರೆಹೋಗುತ್ತೇವೆ. ತಮಾಷೆಯ ವಿಷಯವೆಂದರೆ ಈ ವಾಶಿಂಗ್ ಮಶೀನ್ ಆರಿಸಿಕೊಳ್ಳುವುದಿದೆಯಲ್ಲ, ಅದೂ ಭಾರೀ ಕಷ್ಟದ ಕೆಲಸವೇ!

ಅಂಗಡಿಗೆ ಹೋದಾಗ ಬೇರೆಲ್ಲ ಪರಿಕರಗಳಂತೆ ವಾಶಿಂಗ್ ಮಶೀನುಗಳಲ್ಲೂ ಬಲುದೊಡ್ಡ ವೈವಿಧ್ಯ ಕಾಣಸಿಗುತ್ತದೆ. ಒಂದೊಂದು ಮಾದರಿಯಲ್ಲಿ ಒಂದೊಂದು ವೈಶಿಷ್ಟ್ಯ, ವೈಶಿಷ್ಟ್ಯಕ್ಕೆ ತಕ್ಕಂತೆ ಏರುತ್ತ ಹೋಗುವ ಬೆಲೆ. ಇದೆಲ್ಲ ಸೇರಿ ದೊಡ್ಡದೊಂದು ಗೊಂದಲವಾಗಿ ಕಡೆಗೆ ನಮ್ಮ ಕಣ್ಣಿಗೆ ಚೆನ್ನಾಗಿ ಕಂಡ, ಜೇಬಿಗೆ ಹಿತವೆನಿಸುವ ಬೆಲೆಯ ಯಾವುದೋ ಒಂದು ವಾಶಿಂಗ್ ಮಶೀನ್ ಕೊಂಡುತರುವುದು ಸಾಮಾನ್ಯ ಅಭ್ಯಾಸವೇ ಆಗಿಹೋಗಿದೆ. ಹೀಗೆ ಯಾವುದೋ ಒಂದು ವಾಶಿಂಗ್ ಮಶೀನ್ ಕೊಂಡುತಂದು ಅದು ಸೂಕ್ತವೆನಿಸದೆ ಆಮೇಲೆ ಬೈದುಕೊಳ್ಳುವವರೂ ಅದೆಷ್ಟೋ ಮಂದಿ!

ಈ ಪರಿಸ್ಥಿತಿ ತಪ್ಪಬೇಕಾದರೆ ನಮ್ಮ ಅಗತ್ಯಕ್ಕೆ ತಕ್ಕ ವಾಶಿಂಗ್ ಮಶೀನನ್ನು ಸರಿಯಾಗಿ ಆಯ್ದುಕೊಳ್ಳಬೇಕು ನಿಜ. ಆದರೆ ಅದು ಹೇಗೆ? ಮೊದಲ ಹೆಜ್ಜೆ ವಾಶಿಂಗ್ ಮಶೀನುಗಳ ವಿವಿಧ ಮಾದರಿಗಳ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳುವುದು.

ಕೆಲಸಮಾಡುವ ವಿಧಕ್ಕೆ ಅನುಗುಣವಾಗಿ ವಾಶಿಂಗ್ ಮಶೀನುಗಳಲ್ಲಿ ಎರಡು ವಿಧ: ಸೆಮಿ-ಆಟೋಮ್ಯಾಟಿಕ್ ಹಾಗೂ ಆಟೋಮ್ಯಾಟಿಕ್. ಈ ಪೈಕಿ ಸೆಮಿ-ಆಟೋಮ್ಯಾಟಿಕ್ ಮಶೀನುಗಳ ಬೆಲೆ ಕಡಿಮೆ, ಅವು ಬಳಸುವ ನೀರಿನ ಪ್ರಮಾಣವೂ ಕಡಿಮೆ. ಸದಾಕಾಲ ನಲ್ಲಿಯಲ್ಲಿ ನೀರು ಬರುತ್ತಲೇ ಇರಬೇಕು ಎನ್ನುವ ನಿರ್ಬಂಧವೂ ಇಲ್ಲ. ಆದರೆ ಇದರಲ್ಲಿ ಒಗೆಯುವ - ಒಣಗಿಸುವ ಭಾಗಗಳು ಬೇರೆಬೇರೆಯಾದ್ದರಿಂದ ವಾಶಿಂಗ್ ಮಶೀನ್ ಗಾತ್ರ ದೊಡ್ಡದು. ಹಾಗಾಗಿ ಇದನ್ನು ಇಡಲು ಜಾಸ್ತಿ ಜಾಗ ಬೇಕು. ಪೂರ್ತಿ ಆಟೋಮ್ಯಾಟಿಕ್ ಅಲ್ಲದ್ದರಿಂದ ನಮ್ಮ ಕೆಲಸವೂ ಜಾಸ್ತಿ - ಒಗೆದ ನಂತರ ಒಣಗಿಸಲು ಬಟ್ಟೆಯನ್ನೆಲ್ಲ ತೆಗೆದು ಬೇರೆ ಟಬ್‌ಗೆ ವರ್ಗಾಯಿಸುವುದು ನಮ್ಮದೇ ಜವಾಬ್ದಾರಿ.

ಪೂರ್ತಿ ಆಟೋಮ್ಯಾಟಿಕ್ ವಾಶಿಂಗ್ ಮಶೀನ್ ಆದರೆ ಈ ತಲೆನೋವೆಲ್ಲ ಇರುವುದಿಲ್ಲ. ಆದರೆ ಆ ಬಗೆಯ ವಾಶಿಂಗ್ ಮಶೀನುಗಳ ಬೆಲೆ, ಬಳಕೆಯಾಗುವ ನೀರಿನ ಪ್ರಮಾಣ - ಎರಡೂ ಜಾಸ್ತಿ. ಅಲ್ಲದೆ ಬಟ್ಟೆ ಒಗೆಯುತ್ತಿರುವಾಗ ನೀರಿನ ಪೂರೈಕೆ ನಿರಂತರವಾಗಿ ಇರಲೇಬೇಕು. ಒಗೆಯುವುದು ಒಣಗಿಸುವುದು ಎರಡೂ ಒಂದೇ ಭಾಗದಲ್ಲಾದ್ದರಿಂದ ಒಟ್ಟಾರೆ ಗಾತ್ರವೂ ಸಣ್ಣದೇ.

ಈ ಬಗೆಯ ವಾಶಿಂಗ್ ಮಶೀನುಗಳಲ್ಲಿ ಮತ್ತೆ ಎರಡು ವಿಧ - ಮೇಲುಭಾಗದಿಂದ ಬಟ್ಟೆಗಳನ್ನು ತುಂಬುವ ಮಾದರಿ 'ಟಾಪ್ ಲೋಡಿಂಗ್' ಆದರೆ ಮುಂಭಾಗದಿಂದ ತುಂಬುವ ಮಾದರಿಗೆ 'ಫ್ರಂಟ್ ಲೋಡಿಂಗ್' ಎಂದು ಹೆಸರು. ಇವುಗಳ ಪೈಕಿ ಸಾಮಾನ್ಯವಾಗಿ ಫ್ರಂಟ್ ಲೋಡಿಂಗ್ ಮಾದರಿಗಳಲ್ಲಿ ಹೆಚ್ಚು ವೈಶಿಷ್ಟ್ಯಗಳಿರುತ್ತವೆ:  ಕಡಿಮೆ ವಿದ್ಯುತ್ ಹಾಗೂ ನೀರಿನ ಬಳಕೆ, ಹೆಚ್ಚು ಉತ್ತಮ ಒಗೆತ, ಕಡಿಮೆ ಶಬ್ದ - ಹೀಗೆ. ಆದರೆ ಅವುಗಳ ಬೆಲೆಯೂ ಹೆಚ್ಚು. ಟಾಪ್ ಲೋಡಿಂಗ್ ಮಾದರಿಗಳಲ್ಲಿ ವಿದ್ಯುತ್ ಹಾಗೂ ನೀರಿನ ಬಳಕೆ ತುಸು ಜಾಸ್ತಿಯಾದರೂ ಅವುಗಳ ಬೆಲೆ ಜೇಬಿಗೆ ಹೆಚ್ಚು ಹಿತಕರ.

ವಾಶಿಂಗ್ ಮಶೀನ್ ಕೊಳ್ಳುವಾಗ ಗಮನಿಸಬೇಕಾದ ಇನ್ನೊಂದು ಅಂಶ ಅದರ ಸಾಮರ್ಥ್ಯ. ಒಂದು ಸಲಕ್ಕೆ ವಾಶಿಂಗ್ ಮಶೀನ್ ಎಷ್ಟು ಬಟ್ಟೆ ಒಗೆಯಬಲ್ಲದು ಎನ್ನುವುದನ್ನು ಅದರ ಸಾಮರ್ಥ್ಯ (ಕೆ.ಜಿ.ಗಳಲ್ಲಿ) ಸೂಚಿಸುತ್ತದೆ. ನಮ್ಮ ಅಗತ್ಯಕ್ಕೆ ಎಷ್ಟು ಸಾಮರ್ಥ್ಯ ಸಾಕಾಗುತ್ತದೆ ಎಂದು ಮುಂಚಿತವಾಗಿಯೇ ಯೋಚಿಸಿದ್ದರೆ ವಾಶಿಂಗ್ ಮಶೀನ್ ಆಯ್ಕೆ ಸುಲಭವಾಗುತ್ತದೆ.

ವಾಶಿಂಗ್ ಟಬ್ ಯಾವ ವಸ್ತುವಿನಿಂದ ತಯಾರಾಗಿದೆ ಎನ್ನುವುದು ವಾಶಿಂಗ್ ಮಶೀನಿನ ಗುಣವೈಶಿಷ್ಟ್ಯಗಳ ಪೈಕಿ ಗಮನಿಸಬಹುದಾದ ಇನ್ನೊಂದು ಅಂಶ. ಮಾರುಕಟ್ಟೆಯಲ್ಲಿ ಕಾಣಸಿಗುವ ವಾಶಿಂಗ್ ಮಶೀನುಗಳಲ್ಲಿ ಪ್ಲಾಸ್ಟಿಕ್ ಅಥವಾ ಸ್ಟೀಲ್ ಟಬ್ ಇರುವುದು ಸಾಮಾನ್ಯ ಸಂಗತಿ. ಪ್ಲಾಸ್ಟಿಕ್ ಟಬ್ ಇರುವ ವಾಶಿಂಗ್ ಮಶೀನಿಗಿಂತ ಸ್ಟೀಲ್ ಟಬ್ ಇರುವುದರ ಬೆಲೆ ಹೆಚ್ಚು. ಆದರೆ ಸ್ಟೀಲ್ ಟಬ್ ಇರುವ ಮಾದರಿಗಳಲ್ಲಿ ಬಿಸಿನೀರಿನಿಂದ ಒಗೆಯುವಂತಹ ಹೆಚ್ಚುವರಿ ಸೌಲಭ್ಯಗಳಿರುತ್ತವೆ.

ಒಗೆದ ಬಟ್ಟೆಯನ್ನು ಎಷ್ಟರಮಟ್ಟಿಗೆ ಒಣಗಿಸುತ್ತದೆ ಎನ್ನುವುದು ವಾಶಿಂಗ್ ಮಶೀನ್ ಕಾರ್ಯಕ್ಷಮತೆಯ ಸಂಕೇತಗಳಲ್ಲೊಂದು. ಮಳೆಗಾಲದಲ್ಲಿ, ಹೆಚ್ಚು ಬಿಸಿಲಿರದ ಜಾಗಗಳಲ್ಲಿ ಡ್ರೈಯರ್ ಸಮರ್ಥವಾಗಿದ್ದಷ್ಟೂ ಒಳ್ಳೆಯದು. ಬಿಸಿಲಿನಲ್ಲಿ ಒಣಗಿಸಲು ಸಾಧ್ಯವೇ ಇಲ್ಲ ಎನ್ನುವವರು ಪ್ರತ್ಯೇಕ ಡ್ರೈಯರ್‌ಗಳನ್ನು ಕೊಳ್ಳಬಹುದು; ಅವು ಬಿಸಿ ಗಾಳಿ ಹಾಯಿಸಿ ಬಟ್ಟೆಗಳನ್ನು ಸಂಪೂರ್ಣವಾಗಿ ಒಣಗಿಸುತ್ತವೆ.

ಗಡಸುನೀರಿನಲ್ಲೂ ಸಮರ್ಥವಾಗಿ ಬಟ್ಟೆ ಒಗೆಯುವುದು, ನಡುವೆ ಕರೆಂಟು ಹೋದರೆ ಕೆಲಸ ಎಲ್ಲಿ ನಿಂತಿತ್ತೋ ಕರೆಂಟು ಬಂದಾಗ ಅಲ್ಲಿಂದಲೇ ಮತ್ತೆ ಕೆಲಸ ಶುರುಮಾಡುವುದು, ವೋಲ್ಟೇಜ್ ವ್ಯತ್ಯಯವನ್ನು ನಿಭಾಯಿಸಿಕೊಂಡುಹೋಗುವುದು, ಬಟ್ಟೆ ಜಾಸ್ತಿ ಸುಕ್ಕಾಗದಂತೆ ನೋಡಿಕೊಳ್ಳುವುದು, ಕೈಯಿಂದ ಒಗೆದಷ್ಟು ಉತ್ತಮ ಗುಣಮಟ್ಟದ ಒಗೆತ ನೀಡುವುದು, ಬೇರೆಬೇರೆ ವಿಧದ ಬಟ್ಟೆಗಳಿಗೆ ಬೇರೆಬೇರೆ ರೀತಿಯ ಒಗೆತದ ಆಯ್ಕೆ - ಇಂತಹ ಇನ್ನೂ ಅನೇಕ ಸೌಲಭ್ಯಗಳು ಇಂದಿನ ವಾಶಿಂಗ್ ಮಶೀನುಗಳಲ್ಲಿರುತ್ತವೆ. ಆ ಪೈಕಿ ನಮಗೆ ಅಗತ್ಯವಾದ ಹಾಗೂ ನಮ್ಮ ಬಜೆಟ್ಟಿಗೆ ಸೂಕ್ತವಾದವುಗಳನ್ನು ನಾವು ಆರಿಸಿಕೊಳ್ಳಬಹುದು.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

0 ಪ್ರತಿಕ್ರಿಯೆಗಳು:

Post a Comment