ಬದಲಾವಣೆಯೇ ಜಗದ ನಿಯಮ ಎನ್ನುವ ಮಾತನ್ನು ನಾವೆಲ್ಲರೂ ಕೇಳಿಯೇ ಇದ್ದೇವೆ. ಬಹುಶಃ ಉಳಿದ ಜಗತ್ತಿಗಿಂತ ಹೆಚ್ಚು ವೇಗವಾಗಿ ಬದಲಾಗುವುದು ಇಲೆಕ್ಟ್ರಾನಿಕ್ಸ್ ಜಗತ್ತಿನ ನಿಯಮ ಇರಬೇಕು. ಒಂದರ ಹಿಂದೊಂದರಂತೆ ಹೊಸ ತಂತ್ರಜ್ಞಾನಗಳು ಮಾರುಕಟ್ಟೆಗೆ ಬರುವುದು, ಅವು ಹಳತಾಗುವ ಮೊದಲೇ ಇನ್ನಷ್ಟು ಸುಧಾರಿತ ಆವೃತ್ತಿಗಳ ಪರಿಚಯವಾಗುವುದು ಇಲ್ಲಿ ತೀರಾ ಸಾಮಾನ್ಯ. ಇದಕ್ಕೆ ಕಂಪ್ಯೂಟರುಗಳಿಗಿಂತ ಬೇರೆ ಉದಾಹರಣೆ ಬೇಕಿಲ್ಲ. ಒಂದುಕಾಲಕ್ಕೆ ಕೋಣೆಯ ಗಾತ್ರವಿದ್ದ ಕಂಪ್ಯೂಟರುಗಳು ಮೇಜಿನ ಮೇಲಿಡುವಷ್ಟು ಸಣ್ಣದಾಗಿ, ಡೆಸ್ಕ್‌ಟಾಪಿನಿಂದ ಲ್ಯಾಪ್‌ಟಾಪಿಗೆ ಇಳಿದು ಅಲ್ಲಿಂದ ಮುಂದಕ್ಕೂ ಇನ್ನೂ ಏನೇನೋ ಆಗಲು ಹೊರಟಿವೆಯಲ್ಲ!

ಕಂಪ್ಯೂಟರಿನ ಇಷ್ಟೆಲ್ಲ ಅವತಾರಗಳಲ್ಲೊಂದು ಟ್ಯಾಬ್ಲೆಟ್. ಟಚ್‌ಸ್ಕ್ರೀನ್ ಸೌಲಭ್ಯ ಇರುವ, ಎಲ್ಲ ಅಂಗಗಳೂ ಒಂದೇ ಫಲಕದೊಳಗೆ ಅಡಕವಾಗಿರುವ ಕಂಪ್ಯೂಟರ್ ಅದು. ಕುಳಿತಲ್ಲೇ ಬ್ರೌಸ್ ಮಾಡುವುದು, ಇ-ಪುಸ್ತಕಗಳನ್ನು ಓದುವುದು, ಸಿನಿಮಾ ನೋಡುವುದು, ಹಾಡು ಕೇಳುವುದು, ಆಟವಾಡುವುದು, ಚಾಟ್ ಮಾಡುವುದು - ಇಂತಹ ಹಲವಾರು ಉದ್ದೇಶಗಳಿಗೆ ಹೇಳಿ ಮಾಡಿಸಿದ ಸಾಧನ ಇದು. ಅಷ್ಟೇ ಏಕೆ, ಕ್ಯಾಮೆರಾ ಇರುವ ಟ್ಯಾಬ್ಲೆಟ್ಟುಗಳೂ ಇವೆ. ಜೊತೆಗೆ ಸಿಮ್ ಬಳಸುವ ಸೌಲಭ್ಯವೂ ಇದ್ದರೆ ದೂರವಾಣಿ ಕರೆಯಷ್ಟೇ ಅಲ್ಲ, ವಿಡಿಯೋ ಕಾಲ್ ಕೂಡ ಮಾಡಬಹುದು. ಟ್ಯಾಬ್ಲೆಟ್ ಜೊತೆಗೆ ಬಾಹ್ಯ ಕೀಲಿಮಣೆ ಇಟ್ಟುಕೊಂಡರೆ ಅದನ್ನು ಪುಟ್ಟ ಲ್ಯಾಪ್‌ಟಾಪ್‌ನಂತೆಯೂ ಬಳಸುವುದು ಸಾಧ್ಯ.

ಸರಿ ಇಷ್ಟೆಲ್ಲ ಇದ್ದಮೇಲೆ ಇನ್ನೇನು, ನಮ್ಮ ಮನೆಗೂ ಒಂದು ಟ್ಯಾಬ್ಲೆಟ್ ತರೋಣ ಎಂದು ಹೊರಟರೆ ಅಲ್ಲೊಂದು ಸಮಸ್ಯೆ ಎದುರಾಗುತ್ತದೆ. ಅದು ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿರುವ ವೈವಿಧ್ಯದ್ದು. ಮೂರು-ನಾಲ್ಕು ಸಾವಿರದಿಂದ ಮೂವತ್ತು-ನಲವತ್ತು ಸಾವಿರ ಅಥವಾ ಅದಕ್ಕೂ ಹೆಚ್ಚಿನ ಬೆಲೆಯವರೆಗೆ ಇಷ್ಟೆಲ್ಲ ಬಗೆಯ ಟ್ಯಾಬ್ಲೆಟ್ಟುಗಳು ಸಿಗುತ್ತವಲ್ಲ, ಅವುಗಳ ಪೈಕಿ ನಮಗೆ ಬೇಕಾದ್ದನ್ನು ಆರಿಸಿಕೊಳ್ಳುವುದು ಹೇಗೆ?

ಈ ನಿಟ್ಟಿನಲ್ಲಿ ಗಮನಿಸಬೇಕಾದ ಅಂಶಗಳು ಬೇಕಾದಷ್ಟಿವೆ.


ಮೊದಲನೆಯದಾಗಿ ಟ್ಯಾಬ್ಲೆಟ್ಟಿನ ಪರದೆಯ ಗಾತ್ರವನ್ನೇ ಪರಿಗಣಿಸುವುದಾದರೆ ನಮ್ಮ ಮುಂದೆ ೭ ಇಂಚು ಹಾಗೂ ೧೦ ಇಂಚಿನ ಎರಡು ಪ್ರಮುಖ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಇವೆರಡರ ನಡುವೆ ಒಂದನ್ನು ಆರಿಸಿಕೊಳ್ಳುವಾಗ ನಾವು ಟ್ಯಾಬ್ಲೆಟ್ಟನ್ನು ಯಾವ ಉದ್ದೇಶಕ್ಕಾಗಿ ಬಳಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಮನೆಯಲ್ಲಿ ಕುಳಿತು ಬ್ರೌಸ್ ಮಾಡಲು ದೊಡ್ಡ ಟ್ಯಾಬ್ಲೆಟ್ ಅನುಕೂಲಕರವೆನ್ನಿಸಿದರೆ ಹೊರಗೆ ಓಡಾಡುವಾಗ ಬಳಸಲು, ಕೈಯಲ್ಲಿ ಹಿಡಿದು ಪುಸ್ತಕ ಓದಲು ಸಣ್ಣ ಟ್ಯಾಬ್ಲೆಟ್ ಹೆಚ್ಚು ಸೂಕ್ತ.

ಇನ್ನೊಂದು ಪ್ರಮುಖ ಅಂಶ ಟ್ಯಾಬ್ಲೆಟ್‌ನ ಪರದೆಯ ಗುಣಮಟ್ಟ.

ಟ್ಯಾಬ್ಲೆಟ್ ಪರದೆಯಲ್ಲಿ ಚಿತ್ರ ಹೇಗೆ ಕಾಣುತ್ತದೆ ಎನ್ನುವುದು ಆ ಪರದೆಯ ರೆಸಲ್ಯೂಶನ್‌ನಿಂದ ತೀರ್ಮಾನವಾಗುತ್ತದೆ. ಹೆಚ್ಚಿನ ರೆಸಲ್ಯೂಶನ್ ಇರುವ ಪರದೆಯಾದಷ್ಟೂ ಅದರಲ್ಲಿ ಹೆಚ್ಚು ಸ್ಪಷ್ಟ ಚಿತ್ರಗಳು ಮೂಡಿಬರುತ್ತವೆ. ಪರದೆಯ ಪ್ರತಿ ಇಂಚ್ ವಿಸ್ತೀರ್ಣದಲ್ಲಿ ಎಷ್ಟು ಪಿಕ್ಸೆಲ್‌ಗಳಿವೆ ಎನ್ನುವುದನ್ನು ಸೂಚಿಸುವ ಪಿಕ್ಸೆಲ್ಸ್ ಪರ್ ಇಂಚ್ (ಪಿಪಿಐ) ಮಾನಕ ಹೆಚ್ಚಿನ ಸಂಖ್ಯೆ ತೋರಿಸಿದಷ್ಟೂ ಆ ಪರದೆ ಹೆಚ್ಚು ಉತ್ತಮವಾದದ್ದು ಎಂದು ಅರ್ಥ. ೩೦೦ ಪಿಪಿಐಗಿಂತ ಹೆಚ್ಚಿನ ರೆಸಲ್ಯೂಶನ್ ಇರುವ ಪರದೆಗಳನ್ನು ಫುಲ್ ಎಚ್‌ಡಿ ಎಂದು ಗುರುತಿಸಬಹುದು. ಇನ್ನು ರೆಟಿನಾ ಡಿಸ್‌ಪ್ಲೇ ಅಂತೂ ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ಮೂಡಿಸುತ್ತದೆ.

ಟಚ್‌ಸ್ಕ್ರೀನ್‌ಗಳಲ್ಲಿ ರೆಸಿಸ್ಟಿವ್ ಹಾಗೂ ಕೆಪಾಸಿಟಿವ್ ಎಂಬ ಎರಡು ವಿಧಗಳಿರುವ ಬಗ್ಗೆ ನಮ್ಮಲ್ಲಿ ಅನೇಕರಿಗೆ ಗೊತ್ತಿರಬಹುದು. ಈ ಪೈಕಿ ರೆಸಿಸ್ಟಿವ್ ಪರದೆಯನ್ನು ಕೆಪಾಸಿಟಿವ್ ಪರದೆಯಷ್ಟು ಸರಾಗವಾಗಿ ಉಪಯೋಗಿಸುವುದು ಕಷ್ಟ.

ರೆಸಿಸ್ಟಿವ್ ಪರದೆ ನಮ್ಮ ಸ್ಪರ್ಶಕ್ಕೆ ಸ್ಪಂದಿಸಬೇಕಾದರೆ ಸಾಕಷ್ಟು ಸರ್ಕಸ್ ಮಾಡಬೇಕಾದ್ದು ಅನಿವಾರ್ಯವೇ ಎನ್ನಬಹುದು. ಹಾಗಾಗಿಯೇ ಮೊದಮೊದಲು ಬಂದ ಕೆಲವು ಕಡಿಮೆ ಬೆಲೆಯ ಟ್ಯಾಬ್ಲೆಟ್ಟುಗಳು ತಮ್ಮ ಕಳಪೆ ಗುಣಮಟ್ಟದ ಟಚ್‌ಸ್ಕ್ರೀನ್‌ನಿಂದಾಗಿ ಬಳಕೆದಾರರಿಗೆ ಸಾಕಷ್ಟು ಕಿರಿಕಿರಿಮಾಡುತ್ತಿದ್ದವು.

ಸದ್ಯ ಬಹುತೇಕ ಟ್ಯಾಬ್ಲೆಟ್ಟುಗಳು ಕೆಪಾಸಿಟಿವ್ ಪರದೆಯನ್ನೇ ಬಳಸುತ್ತವೆ; ಆದರೂ ಕಡಿಮೆ ಬೆಲೆಯ ಟ್ಯಾಬ್ಲೆಟ್ ಕೊಳ್ಳಲು ಹೊರಟಾಗ ಅದರ ಪರದೆ ಯಾವ ಬಗೆಯದು ಎಂದು ಒಂದುಬಾರಿ ಖಚಿತಪಡಿಸಿಕೊಳ್ಳುವುದು ಒಳ್ಳೆಯದು.

ಅಂದಹಾಗೆ ಕೆಪಾಸಿಟಿವ್ ಟಚ್‌ಸ್ಕ್ರೀನ್ ಇದ್ದಮಾತ್ರಕ್ಕೆ ಎಲ್ಲ ಟ್ಯಾಬ್ಲೆಟ್ಟುಗಳೂ ತುಂಬಾ ಚೆನ್ನಾಗಿರುತ್ತವೆ ಎನ್ನುವಂತಿಲ್ಲ. ಪರದೆಯ ಗುಣಮಟ್ಟದ ಜೊತೆಗೆ ಟ್ಯಾಬ್ಲೆಟ್‌ನಲ್ಲಿರುವ ಪ್ರಾಸೆಸರ್ ಸಾಮರ್ಥ್ಯ, ಅದರ ರ್‍ಯಾಮ್, ಮೆಮೊರಿ - ಎಲ್ಲವೂ ಮುಖ್ಯವೇ. ಪ್ರಾಸೆಸರ್ ಸಾಮರ್ಥ್ಯ ಹಾಗೂ ರ್‍ಯಾಮ್ ಹೆಚ್ಚಿದ್ದಷ್ಟೂ ಟ್ಯಾಬ್ಲೆಟ್ ಹೆಚ್ಚು ಚುರುಕಾಗಿ ಕೆಲಸಮಾಡಬಲ್ಲದು.

ನಮ್ಮ ಕಡತಗಳು, ಚಿತ್ರಗಳು, ಸಿನಿಮಾ-ಎಂಪಿಥ್ರೀ ಇತ್ಯಾದಿಗಳನ್ನೆಲ್ಲ ತುಂಬಿಟ್ಟುಕೊಳ್ಳಲು ಎಷ್ಟು ಮೆಮೊರಿ ಇದೆ ಎನ್ನುವುದೂ ಮುಖ್ಯವೇ. ಟ್ಯಾಬ್ಲೆಟ್ಟಿನೊಳಗೇ ಇರುವ ಮೆಮೊರಿಯ ಜೊತೆಗೆ ಎಷ್ಟು ಸಾಮರ್ಥ್ಯದ ಬಾಹ್ಯ ಮೆಮೊರಿಯನ್ನು (ಉದಾಹರಣೆಗೆ, ಮೈಕ್ರೋ ಎಸ್‌ಡಿ ಕಾರ್ಡ್) ಬಳಸಬಹುದು ಎನ್ನುವುದೂ ಗಮನಿಸಬೇಕಾದ ಅಂಶ. ಈಚಿನ ಕೆಲ ಮಾದರಿಗಳಂತೆ ಬಾಹ್ಯ ಮೆಮೊರಿ ಬಳಸಲು ಸಾಧ್ಯವಿಲ್ಲ ಎನ್ನುವುದಾದರೆ ಟ್ಯಾಬ್ಲೆಟ್ಟಿನಲ್ಲೇ ನಮ್ಮ ಅಗತ್ಯಕ್ಕೆ ತಕ್ಕಷ್ಟು ಶೇಖರಣಾ ಸಾಮರ್ಥ್ಯ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ.

ಇವಿಷ್ಟರ ಜೊತೆಗೆ ಟ್ಯಾಬ್ಲೆಟ್ಟುಗಳಲ್ಲಿ ಗಮನಿಸಬೇಕಾದ ಇನ್ನೂ ಅನೇಕ ಅಂಶಗಳಿವೆ. ಅವುಗಳನ್ನು ಕುರಿತ ಇನ್ನಷ್ಟು ಮಾಹಿತಿ, ಈ ಲೇಖನದ ಮುಂದಿನ ಭಾಗದಲ್ಲಿ!

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

0 ಪ್ರತಿಕ್ರಿಯೆಗಳು:

Post a Comment