ಟೀವಿ ಕೊಳ್ಳಬೇಕು ಎಂದತಕ್ಷಣ ಯಾವ ಬಗೆಯ ಟೀವಿ ಕೊಳ್ಳುವುದು ಎನ್ನುವ ಪ್ರಶ್ನೆ ಎದುರಾಗುತ್ತದೆ. ಅಂಗಡಿಗೆ ಹೋದಾಗಲೂ ನಮಗೆ ಕೇಳಸಿಗುವುದು ಇದೇ ಪ್ರಶ್ನೆ - ಎಲ್‌ಇಡಿ ಬೇಕೋ, ಪ್ಲಾಸ್ಮಾ ಬೇಕೋ? ಒಮ್ಮೊಮ್ಮೆ ಈ ಪಟ್ಟಿಗೆ ಎಲ್‌ಸಿಡಿಯೂ ಸೇರಿಕೊಂಡುಬಿಡುತ್ತದೆ. ಸದ್ಯಕ್ಕೆ ಮಾರುವವರು - ಕೊಳ್ಳುವವರ ಅಭಾವ ಹಳೆಯ ಮಾದರಿಯ ಸಿಆರ್‌ಟಿ ಟೀವಿಗಳಿಗೆ ಮಾತ್ರವೇ ಇರಬೇಕು. ಈ ಎಲ್‌ಸಿಡಿ, ಎಲ್‌ಇಡಿ, ಪ್ಲಾಸ್ಮಾ ಇತ್ಯಾದಿಗಳೆಲ್ಲ ಏನು ಎಂದು ತಿಳಿದುಕೊಳ್ಳುವುದು ಖಂಡಿತವಾಗಿಯೂ ನಮ್ಮ ಖರೀದಿಯ ನಿರ್ಧಾರಕ್ಕೆ ಸಹಾಯಕವಾಗಬಲ್ಲದು.

ಎಲ್‌ಇಡಿ ಟೀವಿಗಳಿಗೂ ಎಲ್‌ಸಿಡಿ ಟೀವಿಗಳಿಗೂ ನಡುವೆ ತಂತ್ರಜ್ಞಾನದ ದೃಷ್ಟಿಯಿಂದ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಹಾಗೆ ನೋಡಿದರೆ ಇವೆರಡೂ ತಂತ್ರಜ್ಞಾನಗಳ ನಡುವಿನ ವ್ಯತ್ಯಾಸ ಪರದೆಯನ್ನು ಬೆಳಗುವ ವಿಧಾನವೊಂದೇ. ಟ್ಯೂಬ್‌ಲೈಟ್ - ಸಿಎಫ್‌ಎಲ್ ಇತ್ಯಾದಿಗಳನ್ನೆಲ್ಲ ಮನೆಯಲ್ಲಿ ಬಳಸುತ್ತೇವಲ್ಲ, ಎಲ್‌ಸಿಡಿ ಟೀವಿಯ ಪರದೆಯನ್ನು ಬೆಳಗಲಿಕ್ಕೂ ಅಂತಹವೇ (ಫ್ಲೋರಸೆಂಟ್) ದೀಪಗಳು ಬಳಕೆಯಾಗುತ್ತವೆ.

ಆದರೆ ಎಲ್‌ಇಡಿ ಟೀವಿಗಳಲ್ಲಿ, ಅವುಗಳ ಹೆಸರೇ ಹೇಳುವಂತೆ, ಪರದೆಯನ್ನು ಎಲ್‌ಇಡಿ ದೀಪಗಳು ಬೆಳಗುತ್ತವೆ. ಹಾಗಾಗಿ ಈ ಟೀವಿಗಳು ಸಾಕಷ್ಟು ತೆಳ್ಳಗಿರುವುದನ್ನು ನಾವು ಗಮನಿಸಬಹುದು. ಇಷ್ಟೇ ಅಲ್ಲ, ಎಲ್‌ಇಡಿಗಳನ್ನು ಬಳಸುವುದರಿಂದ ಟೀವಿಯಲ್ಲಿ ಚಿತ್ರಗಳು ಹೆಚ್ಚು ಉತ್ತಮವಾಗಿ ಮೂಡಿಬರುತ್ತವೆ, ಹಾಗೂ ವಿದ್ಯುತ್ತಿನ ಬಳಕೆ ಕೂಡ ಕಡಿಮೆಯಾಗುತ್ತದೆ.

ಪರದೆಯ ಮೇಲೆ ಮೂಡಿಬರುವ ಚಿತ್ರದ ಸ್ಪಷ್ಟತೆ ಎಲ್‌ಇಡಿ - ಎಲ್‌ಸಿಡಿ ಎರಡೂ ತಂತ್ರಜ್ಞಾನಗಳಿಗೆ ಒಂದು ಸವಾಲೇ ಸರಿ. ಕ್ಷಿಪ್ರವಾಗಿ ಬದಲಾಗುವ ಚಿತ್ರಗಳು ಈ ಎರಡೂ ತಂತ್ರಜ್ಞಾನಗಳಲ್ಲಿ ಮೂಲತಃ ಅಷ್ಟು ನಿಖರವಾಗಿ ಕಾಣಿಸುವುದಿಲ್ಲ. ಪರದೆಯ ರಿಫ್ರೆಶ್ ರೇಟ್ ಹೆಚ್ಚಿದಂತೆ ಈ ಸಮಸ್ಯೆ ಕಡಿಮೆಯಾಗುತ್ತದೆ. ಹಾಗಾಗಿ ಪರದೆಯ ಮೇಲೆ ಮೂಡಿಬರುವ ಚಿತ್ರದ ಗುಣಮಟ್ಟದ ದೃಷ್ಟಿಯಿಂದ ಟೀವಿಯ ರಿಫ್ರೆಶ್ ರೇಟ್ ಹೆಚ್ಚಿದ್ದಷ್ಟೂ ಒಳಿತು. ಇದು ಸುಮಾರು ೬೦ ಹರ್ಟ್ಸ್‌ನಿಂದ (ಸೆಕೆಂಡಿಗೆ ೬೦ ದೃಶ್ಯಗಳ ಬದಲಾವಣೆ, ಅಂದರೆ ೬೦ ಫ್ರೇಮ್ಸ್/ಸೆಕೆಂಡ್) ಪ್ರಾರಂಭವಾಗುತ್ತದೆ. ರಿಫ್ರೆಶ್ ರೇಟ್ ೧೦೦ ಹರ್ಟ್ಸ್ ಇರುವ ಟೀವಿಗಳು ಈಗ ಸಾಮಾನ್ಯವೇ ಆಗಿಬಿಟ್ಟಿವೆ.

ಎಲ್‌ಇಡಿ ಟೀವಿಗಳಲ್ಲಿ ಮತ್ತೆ ಎರಡು ವಿಧಗಳನ್ನು ಗುರುತಿಸಬಹುದು: ಪರದೆಯ ಹಿಂಭಾಗದಲ್ಲಿ ಎಲ್‌ಇಡಿಗಳಿದ್ದರೆ ಅದು ಬ್ಯಾಕ್-ಲಿಟ್ ಎಲ್‌ಇಡಿ ಟೀವಿ, ಪರದೆಯ ಅಂಚುಗಳಲ್ಲಿದ್ದರೆ ಅದು ಎಜ್-ಲಿಟ್ ಎಲ್‌ಇಡಿ ಟೀವಿ. ಈ ವಿಧಗಳನ್ನು ಬೇರೆಬೇರೆ ಸಂಸ್ಥೆಗಳು ಬೇರೆಬೇರೆ ರೀತಿಯಲ್ಲಿ ಅಳವಡಿಸಿಕೊಂಡಿರುವ ಸಾಧ್ಯತೆ ಇರುತ್ತದೆ; ಹಾಗಾಗಿ ಇವೆರಡರ ಪೈಕಿ ಇಂತಹುದೇ ಉತ್ತಮ ಎಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟದ ಕೆಲಸ.

ಆರ್ಗ್ಯಾನಿಕ್ ಎಲ್‌ಇಡಿ, ಅಂದರೆ 'ಒಎಲ್‌ಇಡಿ'ಯಿಂದ ಬೆಳಗುವ ಟೀವಿಗಳೂ ಇವೆ. ಇಂತಹ ಟೀವಿಗಳಲ್ಲಿ ಪರದೆಯ ಹಿಂದೆ ಅಥವಾ ಅಂಚುಗಳಲ್ಲಿ ಎಲ್‌ಇಡಿಗಳನ್ನು ಅಳವಡಿಸುವ ಅಗತ್ಯವಿರುವುದಿಲ್ಲ; ಏಕೆಂದರೆ ಇಡೀ ಪರದೆಯನ್ನೇ ಅಸಂಖ್ಯ ಪುಟಾಣಿ ಎಲ್‌ಇಡಿಗಳ ಜೋಡಣೆಯಿಂದ ರೂಪಿಸಲಾಗಿರುತ್ತದೆ. ಈ ಪರದೆಯಲ್ಲಿ ಮೂಡುವ ಚಿತ್ರಗಳು ಅತ್ಯಂತ ಸ್ಪಷ್ಟವಾಗಿರುತ್ತದೆ. ಅಷ್ಟೇ ಅಲ್ಲ, ಪ್ರತ್ಯೇಕ ಬೆಳಕಿನ ವ್ಯವಸ್ಥೆಯ ಅಗತ್ಯವಿಲ್ಲದ್ದರಿಂದ ಈ ಬಗೆಯ ಟೀವಿಗಳು ಬಹಳ ತೆಳ್ಳಗಿರುತ್ತವೆ; ಜೊತೆಗೆ ಅವುಗಳ ತೂಕವೂ ಕಡಿಮೆಯಿರುತ್ತದೆ. ಆದರೆ ಸದ್ಯಕ್ಕೆ ಒಎಲ್‌ಇಡಿ ಟೀವಿಗಳ ಬೆಲೆ ಕೊಂಚ ದುಬಾರಿಯೇ; ಸಾಮಾನ್ಯರ ಕೈಗೆಟುಕುವುದು ಕಷ್ಟ.

ಇನ್ನು ಪ್ಲಾಸ್ಮಾ ಟೀವಿ ವಿಷಯಕ್ಕೆ ಬಂದರೆ ಅವುಗಳ ಪರದೆಯಲ್ಲಿ ಮೂಡಿಬರುವ ಬಣ್ಣಗಳು ಬಹಳ ನೈಜವಾಗಿರುತ್ತದೆ. ಚಿತ್ರಗಳು ಕ್ಷಿಪ್ರವಾಗಿ ಬದಲಾದರೂ ಗುಣಮಟ್ಟವೇನೂ ಕಡಿಮೆಯಾಗುವುದಿಲ್ಲ. ಆದರೆ ಅವು ಎಲ್‌ಇಡಿ ಟೀವಿಗಳಿಗಿಂತ ಹೆಚ್ಚು ದಪ್ಪಗಿರುತ್ತವೆ, ಹೆಚ್ಚು ವಿದ್ಯುತ್ ಬಳಸುತ್ತವೆ, ಜೊತೆಗೆ ತೂಕವೂ ಜಾಸ್ತಿ. ಪ್ರಮುಖ ನಿರ್ಮಾತೃಗಳೆಲ್ಲ ಪ್ಲಾಸ್ಮಾ ಟೀವಿಯಿಂದ ದೂರಸರಿಯುತ್ತಿರುವ ಸದ್ಯದ ಜಾಗತಿಕ ಪರಿಸ್ಥಿತಿಯಲ್ಲಿ ಪ್ಲಾಸ್ಮಾ ಟೀವಿಗಳ ಭವಿಷ್ಯ ಅಷ್ಟೇನೂ ಆಶಾದಾಯಕವಾಗಿರುವಂತೆ ಕಾಣುತ್ತಿಲ್ಲ.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

0 ಪ್ರತಿಕ್ರಿಯೆಗಳು:

Post a Comment