ಟೀವಿ ಯಾವ ಬಗೆಯದಾಗಿರಬೇಕು, ಅದರಲ್ಲಿ ಮೂಡುವ ಚಿತ್ರದ ಗುಣಮಟ್ಟ ಹೇಗಿರಬೇಕು ಎಂದು ನಿರ್ಧರಿಸಿದರೆ ಟೀವಿ ಕೊಳ್ಳುವ ಕೆಲಸ ಅರ್ಧ ಮುಗಿದಂತೆ. ಆದರೆ ಉಳಿದರ್ಧ ಭಾಗದ ಕೆಲಸ ಇನ್ನೂ ಇದೆಯಲ್ಲ - ಟೀವಿ ಹೇಗಿರಬೇಕು, ಅದರಲ್ಲಿ ಏನೇನಿರಬೇಕು ಎಂದೆಲ್ಲ ನಿರ್ಧರಿಸುವುದು - ಅದೂ ಮೊದಲರ್ಧದಷ್ಟೇ ಪ್ರಮುಖವಾದದ್ದು. ಆ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಟೀವಿ ಪರದೆಯ ಗಾತ್ರ ಈ ಅಂಶಗಳಲ್ಲಿ ಮೊದಲನೆಯದು. ಬಹಳಷ್ಟು ಸಂದರ್ಭಗಳಲ್ಲಿ ಇದು ನಮ್ಮ ಜೇಬಿನ ಸಾಮರ್ಥ್ಯವೊಂದರ ಮೇಲೆಯೇ ತೀರ್ಮಾನವಾಗಿಬಿಡುತ್ತದೆ. ಅದು ಪೂರ್ತಿ ತಪ್ಪೆಂದು ಹೇಳಲಾಗುವುದಿಲ್ಲ, ಸರಿ. ಆದರೆ ಹೀಗೆ ಮಾಡಿದ ತೀರ್ಮಾನದಿಂದಾಗಿ ಆನಂತರ ಕಿರಿಕಿರಿ ಅನುಭವಿಸುವಂತಾಗುವ ಸಾಧ್ಯತೆಯೂ ಇಲ್ಲದಿಲ್ಲ.

ಹಾಗಾದರೆ ನಮಗೆಷ್ಟು ದೊಡ್ಡ ಟೀವಿ ಬೇಕು? ಗೂಗಲ್ ಮಾಡಿ ನೋಡಿದರೆ ವಿಶ್ವವ್ಯಾಪಿ ಜಾಲದಲ್ಲಿ ಟೀವಿ ಗಾತ್ರ ನಿರ್ಧರಿಸಲು ಬಳಸಬಹುದಾದ ಹತ್ತಾರು ಸೂತ್ರಗಳು ನಮಗೆ ಸಿಗುತ್ತವೆ. ಅಷ್ಟೆಲ್ಲ ತಲೆನೋವು ಬೇಡ ಎನ್ನುವುದಾದರೆ ಇಷ್ಟು ಮಾಡಿದರೆ ಸಾಕು: ಟೀವಿ ಇಡುವುದೆಲ್ಲಿ ಎಂದು ತೀರ್ಮಾನಿಸಿಕೊಳ್ಳುವುದು ಮೊದಲ ಹೆಜ್ಜೆ. ಆನಂತರ ಮಾಡಬೇಕಾದ ಕೆಲಸ ನಾವು ಟೀವಿಯ ಮುಂದೆ ಎಲ್ಲಿ - ಎಷ್ಟು ದೂರದಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಅರಿತುಕೊಳ್ಳುವುದು. ಟೀವಿಗೂ ನಮಗೂ ನಡುವೆ ಇರುತ್ತದಲ್ಲ ಈ ಅಂತರ, ನಾವು ಕೊಳ್ಳುವ ಟೀವಿಯ ಗಾತ್ರ ಅದಕ್ಕೆ ಸರಿಹೊಂದುವಂತಿರಬೇಕು. ಅಂದರೆ, ನಮ್ಮ ಸೋಫಾ ಟೀವಿಯಿಂದ ದೂರದಲ್ಲಿದ್ದಷ್ಟೂ ನಮ್ಮ ಟೀವಿಯ ಗಾತ್ರ ಕೂಡ ದೊಡ್ಡದಾಗಿರುವುದು ಸಾಧ್ಯ.

ಈ ಸೂತ್ರವನ್ನು ಅನುಸರಿಸದಿದ್ದಾಗ ಸಣ್ಣ ಟೀವಿಯನ್ನು ದೂರದಿಂದ, ಅಥವಾ ದೊಡ್ಡ ಟೀವಿಯನ್ನು ತೀರಾ ಹತ್ತಿರದಿಂದ ನೋಡುವಂತಹ ಪರಿಸ್ಥಿತಿ ಬರಬಹುದು. ಅಂದಹಾಗೆ ಹಳೆಯ ಟೀವಿ ಸ್ಟಾಂಡನ್ನೇ ಬಳಸುವ ಯೋಚನೆ ಇದ್ದರೆ ಅದರ ಮೇಲೆ ಎಷ್ಟು ದೊಡ್ಡ ಟೀವಿ ಇಡಲು ಸಾಧ್ಯ ಎನ್ನುವುದನ್ನೂ ಗಮನಿಸಿಕೊಳ್ಳಬೇಕಾಗುತ್ತದೆ; ಟೀವಿಯನ್ನು ಗೋಡೆಗೆ ನೇತುಹಾಕುವಂತಿದ್ದರೆ (ವಾಲ್ ಮೌಂಟ್) ಈ ತಲೆಬಿಸಿ ಇರುವುದಿಲ್ಲ.

ನಾವು ಕೊಳ್ಳುವ ಟೀವಿಯಲ್ಲಿ ಯಾವೆಲ್ಲ ಸೌಲಭ್ಯಗಳಿರಬೇಕು ಎಂದು ನಿರ್ಧರಿಸುವುದೂ ಕೊಂಚ ಕಷ್ಟದ ಕೆಲಸವೇ ಸರಿ. ಥ್ರೀಡಿ ಸೌಲಭ್ಯ, ಅಂತರಜಾಲ ಸಂಪರ್ಕಗಳೆಲ್ಲ ಸೇರಿದಂತೆ ಸದ್ಯದ ಟೀವಿಗಳಲ್ಲಿರುವ ವೈವಿಧ್ಯಮಯ ಸೌಲಭ್ಯಗಳನ್ನು ಗಮನಿಸಿದರೆ ಸಾಕು, ಈ ಅಂಶ ಸ್ಪಷ್ಟವಾಗಿಬಿಡುತ್ತದೆ. ಹಾಗಾಗಿ ನಮ್ಮ ಆಯ್ಕೆಯ ಟೀವಿಯನ್ನು ಅಂತಿಮಗೊಳಿಸುವುದಕ್ಕೆ ಮುಂಚಿತವಾಗಿಯೇ ನಮ್ಮ ಬಜೆಟ್ ಎಷ್ಟು ಎಂದು ತೀರ್ಮಾನಿಸಿಕೊಳ್ಳುವುದು ಒಳಿತು. ಆನಂತರ ನಮ್ಮ ಬಜೆಟ್ಟಿಗೆ ಹೊಂದುವ ಟೀವಿಯನ್ನು ಆರಿಸಿಕೊಳ್ಳುವುದೋ ಅಥವಾ ನಮ್ಮ ಆಯ್ಕೆಯ ಟೀವಿಗೆ ತಕ್ಕಂತೆ ಬಜೆಟ್ಟನ್ನು ಹೊಂದಿಸಿಕೊಳ್ಳುವುದೋ ಅದು ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟ ವಿಷಯ.

ಒಟ್ಟಾರೆಯಾಗಿ ಟೀವಿಯಲ್ಲಿರುವ ಸೌಲಭ್ಯಗಳನ್ನು ಪರಿಶೀಲಿಸುವಾಗ ಆ ಸೌಲಭ್ಯಗಳು ನಮಗೆ ಎಷ್ಟು ಉಪಯುಕ್ತವಾಗಬಲ್ಲವು ಎಂದು ಗಮನಿಸಿಕೊಳ್ಳುವುದು ಒಳ್ಳೆಯದು. ಥ್ರೀಡಿ ಸೌಲಭ್ಯ ಅಥವಾ ಅಂತರಜಾಲ ಸಂಪರ್ಕ ಇರುವ ('ಸ್ಮಾರ್ಟ್') ಟೀವಿಗಳ ಉದಾಹರಣೆಯನ್ನೇ ನೋಡಿ: ಈ ಸೌಲಭ್ಯವಿರುವ ಟೀವಿಯ ಬೆಲೆ ಸಾಮಾನ್ಯ ಟೀವಿಗಿಂತ ಸಾಕಷ್ಟು ಜಾಸ್ತಿಯೇ ಇರುತ್ತದೆ. ಅಂತರಜಾಲ ಸಂಪರ್ಕ ಬೇಕೇಬೇಕು ಎನ್ನುವವರು ಸ್ಮಾರ್ಟ್ ಟೀವಿಯ ಬದಲು ಗೂಗಲ್ ಕ್ರೋಮ್‌ಕಾಸ್ಟ್‌ನಂತಹ ಉಪಕರಣಗಳನ್ನು ಕೊಳ್ಳುವ ಬಗೆಗೂ (ವಿದೇಶಗಳಿಂದ ತರಿಸಿಕೊಳ್ಳುವ ಸಾಧ್ಯತೆ ಇದ್ದರೆ) ಗಮನಹರಿಸಬಹುದು.

ಬೇರೆಬೇರೆ ರೀತಿಯ ಪರಿಕರಗಳನ್ನು ಜೋಡಿಸಲು ಅಗತ್ಯವಾದ ಎಲ್ಲ ಸೌಲಭ್ಯಗಳೂ ಇವೆಯೇ ಎನ್ನುವುದನ್ನು ಟೀವಿ ಕೊಳ್ಳುವ ಮೊದಲೇ ಗಮನಿಸುವುದು ಒಳ್ಳೆಯದು. ಡಿವಿಡಿಯಿಂದ ಬ್ಲೂ ರೇ ಪ್ಲೇಯರ್‌ವರೆಗೆ, ಪೆನ್‌ಡ್ರೈವ್‌ನಿಂದ ವೀಡಿಯೋ ಗೇಮಿಂಗ್ ಸಾಧನಗಳವರೆಗೆ ನಾವು ಏನೆಲ್ಲ ಬಳಸುತ್ತಿದ್ದೇವೆ ಹಾಗೂ ಬಳಸಲು ಇಷ್ಟಪಡುತ್ತೇವೋ ಅದಕ್ಕೆ ಬೇಕಾದ ಸೌಲಭ್ಯಗಳೆಲ್ಲ ನಮ್ಮ ಟೀವಿಯಲ್ಲಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಸದ್ಯ ಎಚ್‌ಡಿ ಗುಣಮಟ್ಟದ ಬಹುತೇಕ ಸಾಧನಗಳು ಎಚ್‌ಡಿಎಂಐ ಸಂಪರ್ಕ ಬಳಸುವುದರಿಂದ ನಮ್ಮ ಟೀವಿಯಲ್ಲಿ ಕನಿಷ್ಠ ಒಂದಾದರೂ ಎಚ್‌ಡಿಎಂಐ ಪೋರ್ಟ್ ಇರುವುದು ಒಳ್ಳೆಯದು. ಪೆನ್‌ಡ್ರೈವ್ ಬಳಸಲು ಯುಎಸ್‌ಬಿ ಪೋರ್ಟ್, ಡಿವಿಡಿ ಪ್ಲೇಯರ್ - ಸೆಟ್ ಟಾಪ್ ಬಾಕ್ಸ್ ಇತ್ಯಾದಿಗಳನ್ನು ಸಂಪರ್ಕಿಸಲು ಎ/ವಿ ಪೋರ್ಟ್‌ಗಳಂತೂ ಇರಲೇಬೇಕು. ಎಚ್‌ಡಿಎಂಐ ಸೌಲಭ್ಯವಿಲ್ಲದ ಕಂಪ್ಯೂಟರ್ ಸಂಪರ್ಕಿಸುವ ಉದ್ದೇಶವಿದ್ದರೆ ಸೀರಿಯಲ್ ಪೋರ್ಟ್ ಕೂಡ ಬೇಕು.

ನಮ್ಮಲ್ಲಿರುವ ಎಲ್ಲ ಸಾಧನಗಳಿಗೂ ಸಾಕಾಗುವಷ್ಟು ಸಂಖ್ಯೆಯ ಪೋರ್ಟ್‌ಗಳಿದ್ದರೆ ಬಹಳ ಒಳ್ಳೆಯದು. ಅದು ಸಾಧ್ಯವಾಗದ ಸಂದರ್ಭಗಳಲ್ಲಿ ಒಂದೇ ಸಂಪರ್ಕವನ್ನು ಎರಡು ಅಥವಾ ಹೆಚ್ಚಿನ ಸಂಖ್ಯೆಯ ಸಾಧನಗಳ ನಡುವೆ ಹಂಚಿಕೊಡುವ 'ಸ್ವಿಚ್'ಗಳೆಂಬ ಸಾಧನದ ಬಳಕೆ ಅನಿವಾರ್ಯವಾಗುತ್ತದೆ. ಇದನ್ನೆಲ್ಲ ಟೀವಿ ಕೊಳ್ಳುವ ಸಂದರ್ಭದಲ್ಲೇ ಯೋಜಿಸಿಕೊಂಡರೆ ದಿನನಿತ್ಯ ಕೇಬಲ್ಲುಗಳನ್ನು ಕೀಳುವ - ಜೋಡಿಸುವ ಕೆಲಸವನ್ನು ತಪ್ಪಿಸಿಕೊಳ್ಳಬಹುದು.

ಟೀವಿಯಲ್ಲಿ ಮೂಡಿಬರುವ ಚಿತ್ರದ ಗುಣಮಟ್ಟದ ಜೊತೆಗೆ ಅದು ಕೇಳಿಸುವ ಧ್ವನಿಯ ಗುಣಮಟ್ಟದತ್ತಲೂ ನಮ್ಮ ಗಮನ ಇರಬೇಕು. ಟೀವಿ ಸ್ಪೀಕರಿನಿಂದ ಹೊರಡುವ ಧ್ವನಿ ಸಾಕಾಗುವುದಿಲ್ಲ ಎನ್ನುವುದಾದರೆ ಸೌಂಡ್ ಬಾರ್ ಸ್ಪೀಕರ್ ಅಥವಾ ಹೋಮ್ ಥಿಯೇಟರ್ ವ್ಯವಸ್ಥೆಗಳನ್ನು ಕೊಳ್ಳುವ ಬಗೆಗೂ ಯೋಚಿಸಬಹುದು.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

1 ಪ್ರತಿಕ್ರಿಯೆಗಳು: