ಕಂಪ್ಯೂಟರಿನಂತೆಯೇ ಫೋನಿನಲ್ಲೂ ಒಂದು ಪ್ರಾಸೆಸರ್ ಇರುತ್ತದಲ್ಲ, ಫೋನು ಎಷ್ಟು ಚೆನ್ನಾಗಿ ಕೆಲಸಮಾಡುತ್ತದೆ ಎನ್ನುವುದು ಮುಖ್ಯವಾಗಿ ಪ್ರಾಸೆಸರ್ ಸಾಮರ್ಥ್ಯವನ್ನೇ ಅವಲಂಬಿಸಿರುತ್ತದೆ. ಹಾಗೆ ನೋಡಿದರೆ ಪ್ರಾಸೆಸರ್ ಅನ್ನು ಫೋನಿನ ಹೃದಯ ಎನ್ನಬಹುದೇನೋ. ಆದ್ದರಿಂದಲೇ ಮೊಬೈಲ್ ಫೋನ್ ಕೊಳ್ಳಲು ಹೊರಟಾಗ ನಮ್ಮ ಆಯ್ಕೆಯ ಫೋನಿನ ಪ್ರಾಸೆಸರ್ ಸಾಮರ್ಥ್ಯ ಎಷ್ಟಿರಬೇಕು ಎನ್ನುವ ಪ್ರಶ್ನೆ ನಮ್ಮನ್ನು ಪ್ರಮುಖವಾಗಿ ಕಾಡುತ್ತದೆ.

ಪ್ರಾಸೆಸರ್ ಸಾಮರ್ಥ್ಯವನ್ನು ಅದರ ವೇಗದ (ಕ್ಲಾಕ್ ಸ್ಪೀಡ್) ಮೂಲಕ - ಮೆಗಾಹರ್ಟ್ಸ್ ಅಥವಾ ಗಿಗಾಹರ್ಟ್ಸ್‌ಗಳಲ್ಲಿ - ಪ್ರತಿನಿಧಿಸುವುದು ಸಂಪ್ರದಾಯ. ಪ್ರಾಸೆಸರ್‌ನ ಸಾಮರ್ಥ್ಯ ಇದೊಂದೇ ಅಂಶವನ್ನು ಅವಲಂಬಿಸುವುದಿಲ್ಲವಾದರೂ ಈ ಸಂಖ್ಯೆಯನ್ನು ನೋಡಿ ಪ್ರಾಸೆಸರ್ ಕಾರ್ಯಕ್ಷಮತೆ ಎಷ್ಟಿರಬಹುದು ಎಂದು ಅಂದಾಜಿಸುವುದು ಸಾಧ್ಯ: ಉದಾಹರಣೆಗೆ ಪ್ರಾಸೆಸರ್ ವೇಗ ಜಾಸ್ತಿಯಿದ್ದಷ್ಟೂ ಅದರ ಸಾಮರ್ಥ್ಯ ಹೆಚ್ಚು ಎನ್ನಬಹುದು. ಹೆಚ್ಚಿನ ವೇಗದ ಪ್ರಾಸೆಸರ್ ಇದ್ದರೆ ನಮ್ಮ ಫೋನಿನಲ್ಲಿ ಕೆಲಸಗಳು ಬೇಗ ಆಗುತ್ತವೆ - ಆಪ್‌ಗಳು ಬೇಗಬೇಗ ತೆರೆದುಕೊಳ್ಳುತ್ತವೆ, ಆಟವಾಡುವುದು ಹೆಚ್ಚು ಖುಷಿಕೊಡುತ್ತದೆ, ಫೋಟೋ ಅಥವಾ ವೀಡಿಯೋ ಎಡಿಟಿಂಗ್‌ನಂತಹ ಕೆಲಸಗಳೂ ಸುಲಭವಾಗುತ್ತವೆ.

ಹಾಗೆಂದು ಪ್ರಾಸೆಸರ್ ವೇಗವನ್ನೇ ನಂಬಿಕೊಂಡು ಫೋನ್ ಆರಿಸಿಕೊಳ್ಳುತ್ತೇವೆ ಎನ್ನುವಂತೆಯೂ ಇಲ್ಲ. ಒಂದೇ ವೇಗದ ಪ್ರಾಸೆಸರುಗಳಲ್ಲಿ ಬೇರೆಬೇರೆ ವಿಧಗಳಿರುವುದು ಸಾಧ್ಯ. ಈ ವ್ಯತ್ಯಾಸ ಪ್ರಾಸೆಸರ್ ರಚನೆಯಲ್ಲಿರಬಹುದು (ಆರ್ಕಿಟೆಕ್ಚರ್), ಅಥವಾ ಅದರಲ್ಲಿರುವ ತಿರುಳುಗಳ (ಕೋರ್) ಸಂಖ್ಯೆಯಲ್ಲೂ ಇರಬಹುದು.

ನಿಜ, ಕಂಪ್ಯೂಟರಿನಂತೆಯೇ ಇಂದಿನ ಫೋನುಗಳಲ್ಲೂ ಒಂದಕ್ಕಿಂತ ಹೆಚ್ಚು ಕೋರ್ ಇರುವ ಪ್ರಾಸೆಸರುಗಳ ಬಳಕೆ ಸಾಮಾನ್ಯ. ಡ್ಯುಯಲ್ ಕೋರ್, ಕ್ವಾಡ್ ಕೋರ್ ಎಂದೆಲ್ಲ ಕೇಳುತ್ತೇವಲ್ಲ, ಅದು ಸೂಚಿಸುವುದು ಇದನ್ನೇ. ಡ್ಯುಯಲ್ ಕೋರ್ ಪ್ರಾಸೆಸರಿನಲ್ಲಿ ಎರಡು ತಿರುಳುಗಳು (ಕೋರ್) ಇದ್ದರೆ ಕ್ವಾಡ್ ಕೋರ್ ಪ್ರಾಸೆಸರಿನಲ್ಲಿ ನಾಲ್ಕು ಇರುತ್ತವೆ.

ಇಷ್ಟಕ್ಕೂ ಈ ಕೋರ್‌ಗಳು ಹೆಚ್ಚು ಸಂಖ್ಯೆಯಲ್ಲಿದ್ದರೆ ನಮಗೇನು ಅನುಕೂಲ? ಸರಳವಾಗಿ ಹೇಳಬೇಕಾದರೆ ಹೆಚ್ಚು ಕೋರ್‌ಗಳಿದ್ದಷ್ಟೂ ಪ್ರಾಸೆಸರ್ ಕಾರ್ಯಕ್ಷಮತೆ ಹೆಚ್ಚಿರುತ್ತದೆ. ಅಂದರೆ, ಒಂದಕ್ಕಿಂತ ಹೆಚ್ಚು ಸಂಖ್ಯೆಯ ಕೋರ್‌ಗಳ ನಡುವೆ ಪ್ರಾಸೆಸರ್‌ನ ಕೆಲಸ ಹಂಚಿಕೊಳ್ಳುವುದು ಸೈದ್ಧಾಂತಿಕವಾಗಿ ಸಾಧ್ಯ: ಒಂದೇ ಕೋರ್ ಬದಲು ಎರಡು ಕೋರ್ ಇದ್ದರೆ ನಿರ್ದಿಷ್ಟ ಕೆಲಸವನ್ನು ಎರಡರಷ್ಟು ವೇಗವಾಗಿ ಮುಗಿಸಬಹುದು. ಸಿಂಗಲ್ ಕೋರ್ ಪ್ರಾಸೆಸರ್‌ಗಿಂತ ಡ್ಯುಯಲ್ ಕೋರ್ ಪ್ರಾಸೆಸರ್ ಉತ್ತಮ, ಡ್ಯುಯಲ್ ಕೋರ್‌ಗಿಂತ ಕ್ವಾಡ್ ಕೋರ್ ಉತ್ತಮ ಎನ್ನುವುದು ಇದೇ ಕಾರಣಕ್ಕಾಗಿ.

ಹೊಚ್ಚಹೊಸ ಮೋಟೋ ಜಿ ಫೋನನ್ನು ಫ್ಲಿಪ್‌ಕಾರ್ಟ್‌ನಲ್ಲಿ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಉದಾಹರಣೆಗೆ ನಿಮ್ಮ ಫೋನಿನ ಪ್ರಾಸೆಸರ್‌ನಲ್ಲಿ ಎರಡು ಕೋರ್ ಇದೆ ಎಂದುಕೊಳ್ಳೋಣ. ನೀವು ಬ್ರೌಸಿಂಗ್ ಮಾಡಬೇಕೆಂದಾಗ ಒಂದು ಕೋರ್ ಆ ಕೆಲಸಕ್ಕೆ ಮೀಸಲಾಗಿರುತ್ತದೆ, ಎರಡನೆಯ ಕೋರ್ ಕೆಲಸವಿಲ್ಲದೆ ಹಾಯಾಗಿರುತ್ತದೆ. ಅದೇ ಸಮಯದಲ್ಲೊಂದು ಕರೆ ಬಂತು ಎಂದಾಗ ಎರಡನೇ ಕೋರ್ ತಕ್ಷಣ ಕಾರ್ಯನಿರತವಾಗುತ್ತದೆ, ಕರೆಯಿಂದ ನಿಮ್ಮ ಬ್ರೌಸಿಂಗ್ ಕೆಲಸಕ್ಕೆ ಕಿರಿಕಿರಿಯಾಗದಂತೆ ನೋಡಿಕೊಳ್ಳುತ್ತದೆ. ಅಂದರೆ, ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ನಿರ್ವಹಿಸುತ್ತದೆ.

ತಂತ್ರಜ್ಞಾನದ ಪರಿಭಾಷೆಯಲ್ಲಿ ಮಲ್ಟಿ ಟಾಸ್ಕಿಂಗ್ ಎಂದು ಕರೆಯುವುದು ಇದನ್ನೇ. ನಾಲ್ಕು ಕೋರ್‌ಗಳಿರುವ ಪ್ರಾಸೆಸರ್‌ನಲ್ಲಿ ಈ ಸಾಧ್ಯತೆ ಇನ್ನೂ ಜಾಸ್ತಿ. ಹಾಗಾಗಿಯೇ ಕ್ವಾಡ್‌ಕೋರ್ ಪ್ರಾಸೆಸರ್ ಇರುವ ಫೋನುಗಳಲ್ಲಿ ಹೆಚ್ಚು ಸಾಮರ್ಥ್ಯ ಬೇಡುವ ಅತ್ಯಾಧುನಿಕ ಆಪ್‌ಗಳನ್ನೆಲ್ಲ ಬಳಸುವುದು ಸರಾಗವಾಗುತ್ತದೆ.

ಹಾಗೆಂದು ಕ್ವಾಡ್ ಕೋರ್ ಪ್ರಾಸೆಸರ್ ಇರುವ ಫೋನು ತೆಗೆದುಕೊಂಡಾಕ್ಷಣ ಕೆಲಸ ಮುಗಿಯುತ್ತದೆಯೇ? ಬಹುಶಃ ಇಲ್ಲ. ಫೋನಿನಲ್ಲಿ ಎಷ್ಟು ರ್‍ಯಾಮ್ ಇದೆ, ಮತ್ತು ಫೋನಿನ ಬ್ಯಾಟರಿ ಎಷ್ಟು ಸಮಯ ಬಾಳಿಕೆ ಬರುತ್ತದೆ ಎನ್ನುವ ಅಂಶಗಳೂ ಮುಖ್ಯವೇ.

ಪ್ರಾಸೆಸರ್ ವೇಗವಾಗಿ ಕೆಲಸಮಾಡಬೇಕು ಎನ್ನುವುದಾದರೆ ಅದು ಆ ಕ್ಷಣದಲ್ಲಿ ಬಳಸುತ್ತಿರುವ ಮಾಹಿತಿಯನ್ನೆಲ್ಲ ರ್‍ಯಾಂಡಮ್ ಆಕ್ಸೆಸ್ ಮೆಮೊರಿಯಲ್ಲಿ (ರ್‍ಯಾಮ್) ಇಟ್ಟುಕೊಳ್ಳುವ ಸೌಲಭ್ಯ ಇರಬೇಕು. ಅಂದರೆ, ರ್‍ಯಾಮ್ ಹೆಚ್ಚಿದ್ದಷ್ಟೂ ಒಳ್ಳೆಯದು ಎಂದಾಯಿತು. ಉತ್ತಮ ಸಾಮರ್ಥ್ಯದ ಪ್ರಾಸೆಸರ್ ಜೊತೆಗೆ ಹೆಚ್ಚಿನ ರ್‍ಯಾಮ್ ಕೂಡ ಇದ್ದರೆ ಫೋನಿನ ಕಾರ್ಯಕ್ಷಮತೆ ಸಹಜವಾಗಿಯೇ ಚೆನ್ನಾಗಿರುತ್ತದೆ.

ರ್‍ಯಾಮ್ ಜೊತೆಗೆ ಫೋನಿನಲ್ಲಿರುವ ಮೆಮೊರಿ ಕೂಡ ಮುಖ್ಯವೇ. ಫೋಟೋ ಹಾಡು ಸಿನಿಮಾಗಳನ್ನೆಲ್ಲ ಶೇಖರಿಸಿಟ್ಟುಕೊಳ್ಳಲು ನಮಗೆಷ್ಟು ಜಾಗ ಬೇಕೋ ಅಷ್ಟು ನಮ್ಮ ಫೋನಿನಲ್ಲಿರುವಂತೆ ನೋಡಿಕೊಳ್ಳಬೇಕು. ಹೆಚ್ಚುವರಿಯಾಗಿ ಮೆಮೊರಿ ಕಾರ್ಡ್ ಬಳಸುವುದಾದರೆ ಎಷ್ಟು ಸಾಮರ್ಥ್ಯದ ಮೆಮೊರಿ ಕಾರ್ಡ್ ಬಳಸಬಹುದು ಎನ್ನುವುದನ್ನೂ ಗಮನಿಸಿಕೊಳ್ಳುವುದು ಒಳ್ಳೆಯದು. ಹಾಗೆ ಮೆಮೊರಿ ಕಾರ್ಡ್ ಬಳಸುವಂತಿಲ್ಲ ಎನ್ನುವುದಾದರೆ ಫೋನ್ ಕೊಳ್ಳುವ ಮೊದಲೇ ಮೆಮೊರಿ ಎಷ್ಟು ಬೇಕು ಎಂದು ತೀರ್ಮಾನಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ ಫೋನಿನ ಜಾಹೀರಾತಿನಲ್ಲಿ ಹೇಳಿದಷ್ಟು ಸ್ಥಳಾವಕಾಶ ನಮ್ಮ ಬಳಕೆಗೆ ಸಿಗುವುದಿಲ್ಲ ಎನ್ನುವುದನ್ನೂ ಗಮನದಲ್ಲಿಟ್ಟುಕೊಳ್ಳಬೇಕು.

ಇನ್ನು ಫೋನ್ ಬಳಸುವ ಅನುಭವ ನಮಗೆ ಖುಷಿಕೊಡಬೇಕಾದರೆ ಅದರ ಬ್ಯಾಟರಿ ಹೆಚ್ಚುಕಾಲ ಬಾಳಿಕೆ ಬರುವಂತಿರಬೇಕು. ಎಷ್ಟೇ ವೇಗವಾಗಿ ಕೆಲಸಮಾಡಿದರೂ ಪದೇಪದೇ ಚಾರ್ಜ್ ಮಾಡಬೇಕಾಗಿ ಬಂದರೆ ನಾವು ಆ ಫೋನನ್ನು ಇಷ್ಟಪಡುವುದಾದರೂ ಹೇಗೆ? ಆದ್ದರಿಂದ ಫೋನ್ ಕೊಳ್ಳುವ ಸಂದರ್ಭದಲ್ಲಿ ಅದರ ಬ್ಯಾಟರಿಯ ಬಗೆಗೂ ತಿಳಿದುಕೊಳ್ಳಬೇಕು.

ಉತ್ತಮ ವಿನ್ಯಾಸದ ಪ್ರಾಸೆಸರುಗಳು ಹೆಚ್ಚು ಬ್ಯಾಟರಿ ಬಳಸುವುದಿಲ್ಲ ಎನ್ನುವುದು ಇಲ್ಲಿ ಗಮನಿಸಬಹುದಾದ ಅಂಶ. ಆದರೆ ಫೋನಿನ ಪ್ರಾಸೆಸರ್ ಕೆಲಸಮಾಡುವಾಗ ಎಷ್ಟು ಬ್ಯಾಟರಿ ಬಳಸುತ್ತದೆ ಎನ್ನುವುದು ನಮಗೆ ಸುಲಭಕ್ಕೆ ಗೊತ್ತಾಗುವುದಿಲ್ಲವಲ್ಲ! ಅಂತಹ ಸಂದರ್ಭಗಳಲ್ಲಿ ಫೋನಿನ ಬ್ಯಾಟರಿ ಎಷ್ಟು ಎಂಎಎಚ್(mAh)ನದು ಎನ್ನುವುದರ ಮೇಲೆ ಅದು ಎಷ್ಟು ಹೊತ್ತು ಬಾಳಿಕೆ ಬರುತ್ತದೆ ಎಂದು ಅಂದಾಜಿಸಬಹುದು.

ಎಂಎಎಚ್, ಅಂದರೆ ಮಿಲಿ ಆಂಪಿಯರ್ ಅವರ್, ಬ್ಯಾಟರಿಯಲ್ಲಿ ಎಷ್ಟು ಚಾರ್ಜ್ ಉಳಿಸಿಡಬಹುದು ಎನ್ನುವುದನ್ನು ಸೂಚಿಸುತ್ತದೆ. ಹೆಚ್ಚು ಎಂಎಎಚ್ ಸಾಮರ್ಥ್ಯದ ಬ್ಯಾಟರಿಗಳನ್ನು ಹೆಚ್ಚು ಸಮಯದವರೆಗೆ ಉಪಯೋಗಿಸುವುದು ಸಾಧ್ಯ.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

0 ಪ್ರತಿಕ್ರಿಯೆಗಳು:

Post a Comment