ಕಳೆದ ಒಂದು ದಶಕದಲ್ಲಿ ನಾವೆಲ್ಲ ಅತಿಹೆಚ್ಚುಬಾರಿ ಕೊಂಡಿರುವ ವಿದ್ಯುನ್ಮಾನ ಉಪಕರಣ ಯಾವುದು ಎಂದು ನೋಡಲುಹೊರಟರೆ ಬಹುಶಃ ಆ ಸಾಲಿನಲ್ಲಿ ಮೊಬೈಲ್ ಫೋನ್ ಪ್ರಮುಖ ಸ್ಥಾನ ಪಡೆದುಕೊಂಡಿರುತ್ತದೆ. ಕಳೆದುಹೋಯಿತೆಂದೋ, ರಿಪೇರಿ ಸಾಧ್ಯತೆ ಇಲ್ಲವೆಂದೋ, ಹಳೆಯದಾಯಿತು ಎಂದೋ - ಕಡೆಗೆ ಉಪಯೋಗಿಸಿ ಬೇಜಾರಾಯಿತು ಎಂದಾದರೂ - ನಾವು ನಮ್ಮ ಮೊಬೈಲ್ ಫೋನ್ ಬದಲಿಸುತ್ತಲೇ ಇರುತ್ತೇವೆ. ಒಂದು ಫೋನನ್ನು ಮೂರು-ನಾಲ್ಕು ವರ್ಷ ಬಳಸಿದರೆ ಅದೇ ಹೆಚ್ಚು!

ಹೀಗಿದ್ದರೂ ಹೊಸ ಫೋನ್ ಆಯ್ಕೆ ನಮ್ಮೆಲ್ಲರಿಗೂ ಸಮಸ್ಯೆಯೇ. ಮಾರುಕಟ್ಟೆಯಲ್ಲಿರುವ ಅಗಾಧ ಸಂಖ್ಯೆಯ ಆಯ್ಕೆಗಳು ನಮ್ಮನ್ನು ಸುಲಭವಾಗಿ ಗೊಂದಲಗೊಳಿಸುತ್ತವೆ. ಹಾಗಾಗಿ ಬಹಳಷ್ಟು ಸಾರಿ ನಮ್ಮ ಆಯ್ಕೆ ಯಾರದೋ ಸಲಹೆ ಅಥವಾ ಜೇಬಿನ ಸಾಮರ್ಥ್ಯವನ್ನಷ್ಟೆ ಅವಲಂಬಿಸಿರುತ್ತದೆ. ಈ ಪರಿಸ್ಥಿತಿ ತಪ್ಪಿಸಿ ನಮ್ಮ ಅಗತ್ಯಗಳಿಗೆ ತಕ್ಕಂತಹ ಮೊಬೈಲ್ ಫೋನನ್ನು ಆಯ್ದುಕೊಳ್ಳುವುದು ಹೇಗೆ? ಯಾವುದೇ ಮೊಬೈಲ್ ಫೋನಿನಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶಗಳು ಯಾವುವು? ಆ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.

ಇಂದಿನ ಮೊಬೈಲುಗಳಲ್ಲಿ ಹಿಂದಿನ ಕಂಪ್ಯೂಟರುಗಳಿಗಿಂತ ಹೆಚ್ಚಿನ ಸಂಸ್ಕರಣಾ ಸಾಮರ್ಥ್ಯವಿರುವುದು ನಮಗೆಲ್ಲ ಗೊತ್ತೇ ಇದೆ. ಮೊಬೈಲುಗಳೆಲ್ಲ ಕಂಪ್ಯೂಟರುಗಳಾದ ಮೇಲೆ ಅದರಲ್ಲಿ ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ, ಓಎಸ್) ಇಲ್ಲದಿದ್ದರೆ ಹೇಗೆ? ಅದ್ದರಿಂದಲೇ ಫೋನಿನಲ್ಲಿ ಯಾವ ಓಎಸ್ ಇದೆ ಎನ್ನುವ ಅಂಶವೂ ಇದೀಗ ಮೊಬೈಲ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಆಯ್ಕೆಯ ಓಎಸ್ ಬಳಕೆದಾರ ಸ್ನೇಹಿಯಾಗಿದ್ದಷ್ಟೂ, ಅದರಲ್ಲಿ ಹೆಚ್ಚುಹೆಚ್ಚು ಸಂಖ್ಯೆಯ ತಂತ್ರಾಂಶಗಳು (ಆಪ್) ಲಭ್ಯವಿದ್ದಷ್ಟೂ ಅನುಕೂಲ ನಮಗೇ.

ಮೊಬೈಲ್ ಆಪರೇಟಿಂಗ್ ಸಿಸ್ಟಂಗಳಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರುಗಳು ಆಂಡ್ರಾಯ್ಡ್ ಹಾಗೂ ಐಓಎಸ್‌ನದು. ಲಕ್ಷಾಂತರ ಸಂಖ್ಯೆಯ ಆಪ್‌ಗಳ ಲಭ್ಯತೆಯಷ್ಟೇ ಅಲ್ಲದೆ ಇವೆರಡು ಓಎಸ್‌ಗಳಿಗೂ ತಮ್ಮದೇ ಆದ ಹಲವಾರು ವೈಶಿಷ್ಟ್ಯಗಳಿವೆ. ಬಳಕೆದಾರನಿಗೆ ಹೊಸತನ್ನು ನೀಡುವಲ್ಲಿ ಇವೆರಡೂ ಓಎಸ್‌ಗಳು ಸದಾ ಸ್ಪರ್ಧೆಯಲ್ಲಿರುತ್ತವೆ ಎಂದರೂ ಸರಿಯೇ.

ಆದರೆ ಬಳಕೆದಾರನ ದೃಷ್ಟಿಯಿಂದ ನೋಡಿದಾಗ ಐಓಎಸ್ ಬಳಸುವ ಫೋನುಗಳ ಸೀಮಿತ ಸಂಖ್ಯೆ (ಐಓಎಸ್ ಬಳಸುವುದು ಆಪಲ್ ಸಂಸ್ಥೆಯ ಐಫೋನ್ ಮಾತ್ರ) ಹಾಗೂ ಕೊಂಚ ದುಬಾರಿಯೆನಿಸುವ ಬೆಲೆ ಕೊಳ್ಳುವ ನಿರ್ಧಾರದ ಮೇಲೆ ಪರಿಣಾಮ ಬೀರಬಲ್ಲದು. ಆದರೆ ಆಂಡ್ರಾಯ್ಡ್‌ನಲ್ಲಿ ಈ ಸಮಸ್ಯೆ ಇಲ್ಲ - ಅನೇಕ ತಯಾರಕರು ಈ ಆಪರೇಟಿಂಗ್ ಸಿಸ್ಟಂ ಬಳಸುವುದರಿಂದ ಎಲ್ಲ ಬಜೆಟ್ಟುಗಳಿಗೂ ಹೊಂದುವ ಮಾದರಿಗಳು ಮಾರುಕಟ್ಟೆಯಲ್ಲಿವೆ. ಮೂಲ ಆಂಡ್ರಾಯ್ಡ್‌ನಲ್ಲಿರುವ ಸೌಲಭ್ಯಗಳ ಜೊತೆಗೆ ಫೋನ್ ತಯಾರಕರು ಸೇರಿಸುವ ವೈಶಿಷ್ಟ್ಯಗಳೂ ಹೆಚ್ಚುವರಿಯಾಗಿ ದೊರಕುತ್ತವೆ. ಅತ್ಯಂತ ಹೆಚ್ಚು ಬಳಕೆಯಾಗುವ ಮೊಬೈಲ್ ಫೋನ್ ಆಪರೇಟಿಂಗ್ ಸಿಸ್ಟಂ ಎಂಬ ಹೆಗ್ಗಳಿಕೆ ಆಂಡ್ರಾಯ್ಡ್‌ಗೆ ದೊರಕಲು ಇದೂ ಒಂದು ಪ್ರಮುಖ ಕಾರಣ ಎನ್ನಬಹುದು.

ಆಂಡ್ರಾಯ್ಡ್, ಐಓಎಸ್‌ಗಳ ಜೊತೆಗೆ ನಮಗೆ ದೊರಕುವ ಇನ್ನೊಂದು ಪ್ರಮುಖ ಆಯ್ಕೆ ವಿಂಡೋಸ್ ಫೋನ್‌ನದು. ನೋಕಿಯಾ ಫೋನುಗಳು ಈ ಆಪರೇಟಿಂಗ್ ಸಿಸ್ಟಂ ಬಳಸಲು ಶುರುಮಾಡಿದಲ್ಲಿಂದ ಇದು ತಕ್ಕಮಟ್ಟಿನ ಜನಪ್ರಿಯತೆ ಗಳಿಸಿಕೊಂಡಿದೆಯಾದರೂ ಈ ಆಪರೇಟಿಂಗ್ ಸಿಸ್ಟಂ ಬಳಸುವ ಫೋನುಗಳ ಸಂಖ್ಯೆ ಇನ್ನೂ ಕಡಿಮೆಯೇ ಇದೆ ಎನ್ನಬಹುದು. ಆಂಡ್ರಾಯ್ಡ್-ಐಓಎಸ್‌ಗಳಿಗೆ ಹೋಲಿಸಿದರೆ ವಿಂಡೋಸ್ ಫೋನ್‌ನಲ್ಲಿ ಲಭ್ಯವಿರುವ ಆಪ್‌ಗಳ ಸಂಖ್ಯೆಯೂ ಕಡಿಮೆಯೇ.

ಇವಿಷ್ಟೇ ಅಲ್ಲದೆ ಇನ್ನೂ ಕೆಲ ಆಪರೇಟಿಂಗ್ ಸಿಸ್ಟಂಗಳನ್ನು ಬಳಸುವ ಮೊಬೈಲುಗಳೂ ಮಾರುಕಟ್ಟೆಯಲ್ಲಿವೆ. ಆ ಪೈಕಿ ಬ್ಲ್ಯಾಕ್‌ಬೆರಿ ಫೋನುಗಳು ತಮ್ಮ ಒಂದು ಕಾಲದ ಜನಪ್ರಿಯತೆಯನ್ನು ಮತ್ತೆ ಪಡೆಯಲು ಹೆಣಗಾಡುತ್ತಿವೆ. ಇನ್ನು ಸಿಂಬಿಯನ್ ಅಂತೂ ಬಹುತೇಕ ನೇಪಥ್ಯಕ್ಕೆ ಸರಿದಾಗಿದೆ. ಬ್ರೌಸರ್ ಪ್ರಪಂಚದಲ್ಲಿ ಹೆಸರುಮಾಡಿರುವ ಫೈರ್‌ಫಾಕ್ಸ್, ಲಿನಕ್ಸ್ ಜಗತ್ತಿನ ಉಬುಂಟು ಮೊದಲಾದ ಅನೇಕ ಸಂಸ್ಥೆಗಳು ತಮ್ಮದೇ ಮೊಬೈಲ್ ಓಎಸ್‌ಗಳನ್ನು ಪರಿಚಯಿಸಿದೆಯಾದರೂ ಅವು ಸದ್ಯಕ್ಕೆ ಇನ್ನೂ ಹೇಳಿಕೊಳ್ಳುವಂತಹ ಜನಪ್ರಿಯತೆ ಗಳಿಸಿಲ್ಲ.

ಇಷ್ಟೆಲ್ಲ ಆಪರೇಟಿಂಗ್ ಸಿಸ್ಟಂಗಳ ನಡುವೆ ನಮಗೆ ಹಿಡಿಸಿದ್ದನ್ನು ಆರಿಸಿಕೊಂಡ ಮೇಲೆ ನಮಗೆದುರಾಗುವ ಇನ್ನೊಂದು ಪ್ರಶ್ನೆ ಮೊಬೈಲ್ ಫೋನಿನ ಗಾತ್ರದ್ದು.

ಒಂದು ಕಾಲದಲ್ಲಿ ಮೊಬೈಲ್ ಫೋನುಗಳು ಕಾರ್ಡ್‌ಲೆಸ್ ಫೋನುಗಳಷ್ಟು ದೊಡ್ಡದಾಗಿರುತ್ತಿದ್ದವು. ಮೊಬೈಲ್ ಫೋನಿನ ಮೊದಲ ಮಾದರಿ, ೧೯೭೩ರಲ್ಲಿ ತಯಾರಾದದ್ದು, ಹೆಚ್ಚೂಕಡಿಮೆ ಒಂದು ಕೇಜಿ ತೂಕವಿತ್ತಂತೆ. ಸದ್ಯ ನಾವೀಗ ತೂಕದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಬೇಕಿಲ್ಲದಿದ್ದರೂ ಪರದೆಯ ಗಾತ್ರ (ಸ್ಕ್ರೀನ್ ಸೈಜ್) ನಮ್ಮನ್ನು ಸಾಕಷ್ಟು ಗೊಂದಲಕ್ಕೆ ದೂಡಬಲ್ಲದು.

ಪರದೆ ದೊಡ್ಡದಾದಷ್ಟೂ ಚಲನಚಿತ್ರ ವೀಕ್ಷಣೆ, ಬ್ರೌಸಿಂಗ್, ಗೇಮ್ಸ್ ಇತ್ಯಾದಿಗಳೆಲ್ಲ ಸರಾಗವಾಗುತ್ತದೆ ನಿಜ. ಆದರೆ ಹಾಗೆಂದು ತೀರಾ ದೊಡ್ಡ ಪರದೆಯ ಫೋನ್ ಕೊಂಡರೆ ಅದನ್ನು ಬಳಸುವುದು, ಎತ್ತಿಕೊಂಡು ಓಡಾಡುವುದೇ ಕಿರಿಕಿರಿಯ ಕೆಲಸವಾಗಬಹುದು. ಹಾಗಾಗಿ ನಮ್ಮ ಆಯ್ಕೆಯ ಫೋನಿನ ಪರದೆ ಎಷ್ಟು ದೊಡ್ಡದಾಗಿರಬೇಕು ಎಂದು ಮುಂಚಿತವಾಗಿಯೇ ತೀರ್ಮಾನಿಸಿಕೊಳ್ಳುವುದು ಒಳಿತು.

ಅಂದಹಾಗೆ, ಟೀವಿಗಳಲ್ಲಿರುವಂತೆಯೇ ಮೊಬೈಲಿನಲ್ಲೂ ಪರದೆಯ ಅಳತೆ ಎದುರುಬದಿರಿನ ಮೂಲೆಗಳ ನಡುವಿನ (ಡಯಾಗನಲ್) ಅಂತರವನ್ನು ಸೂಚಿಸುತ್ತದೆ. ಸದ್ಯ ಮಾರುಕಟ್ಟೆಯಲ್ಲಿರುವ ಫೋನುಗಳ ಪರದೆ ನಾಲ್ಕರಿಂದ ಆರು ಇಂಚಿನ ಆಸುಪಾಸಿನಲ್ಲಿರುತ್ತದೆ.

ಓಎಸ್ ಯಾವುದಿರಬೇಕು ಹಾಗೂ ಪರದೆ ಎಷ್ಟು ದೊಡ್ಡದಿರಬೇಕು ಎಂದಷ್ಟೆ ತೀರ್ಮಾನಿಸಿದರೆ ಫೋನಿನ ಆಯ್ಕೆ ಮುಗಿಯುವುದಿಲ್ಲ. ಹಾಗಾದರೆ ನಮ್ಮ ಫೋನಿನಲ್ಲಿರಬೇಕಾದ ಇತರ ಸೌಲಭ್ಯಗಳು ಯಾವುವು? ಹೆಚ್ಚಿನ ವಿವರ ಮುಂದಿನ ಲೇಖನದಲ್ಲಿ.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

1 ಪ್ರತಿಕ್ರಿಯೆಗಳು:

 1. thank u. thumba olleya..vishayagalannu thilisikottiddira.
  and sir i have some quetions about mobile
  nanu htc mobile use madta eddini super mobile but
  1 fault etthu, internal memory kammi hagagi nanu rooting madi memory card na, internal card thara use madbeku
  but ega mobile rooting agta ella.. root unlouck madiddini. pc use madi.. edara bagge nikara mahithi dereyabahuda..

  ReplyDelete