ಪೆನ್ ಡ್ರೈವ್ ಕೊಳ್ಳುವಾಗ ಅದರ ಶೇಖರಣಾ ಸಾಮರ್ಥ್ಯವನ್ನಷ್ಟೆ ಗಮನಿಸುವುದು ಸಾಮಾನ್ಯ ಅಭ್ಯಾಸ. ಬಹುತೇಕ ಎಲ್ಲರೂ ಹೇಳುವುದು "ಇಷ್ಟು ರೂಪಾಯಿ ಕೊಟ್ಟೆ, ಇಷ್ಟು ಜಿಬಿ ಸಾಮರ್ಥ್ಯದ ಪೆನ್ ಡ್ರೈವ್ ಕೊಂಡೆ" ಎಂದೇ.

ಹಾಗಾದರೆ ಮಾರುಕಟ್ಟೆಯಲ್ಲಿರುವ ಎಲ್ಲ ಎಂಟು ಜಿಬಿ ಪೆನ್‌ಡ್ರೈವ್‌ಗಳು, ಎಲ್ಲ ಹದಿನಾರು ಜಿಬಿ ಪೆನ್‌ಡ್ರೈವ್‌ಗಳು, ಎಲ್ಲ ಮೂವತ್ತೆರಡು ಜಿಬಿ ಪೆನ್‌ಡ್ರೈವ್‌ಗಳೂ ಒಂದೇ ಎಂದು ಹೇಳಬಹುದೇ? ಖಂಡಿತಾ ಇಲ್ಲ. ಒಂದೇ ಸಾಮರ್ಥ್ಯದ ಎರಡು ಪೆನ್‌ಡ್ರೈವ್‌ಗಳ ನಡುವೆ ಹಲವು ವ್ಯತ್ಯಾಸಗಳಿರಬಹುದು.

ಕಂಪ್ಯೂಟರಿನಿಂದ ಪೆನ್‌ಡ್ರೈವ್‌ಗೆ, ಅಥವಾ ಪೆನ್‌ಡ್ರೈವ್‌ನಿಂದ ಕಂಪ್ಯೂಟರಿಗೆ ಮಾಹಿತಿಯನ್ನು ವರ್ಗಾಯಿಸುವ ವೇಗದಲ್ಲಿ ಅಂತಹ ಒಂದು ವ್ಯತ್ಯಾಸವನ್ನು ನಾವು ಕಾಣಬಹುದು. ಸಣ್ಣಪುಟ್ಟ ಕಡತಗಳನ್ನು ವರ್ಗಾಯಿಸುವಾಗ ಈ ಸಂಗತಿ ನಮ್ಮ ಗಮನಕ್ಕೆ ಬಾರದೆ ಹೋಗಬಹುದಾದರೂ ದೊಡ್ಡ ಕಡತಗಳನ್ನು ವರ್ಗಾಯಿಸುವಾಗ ಆ ಕೆಲಸ ಎಷ್ಟು ಬೇಗನೆ ಮುಗಿಯುತ್ತದೆ ಎನ್ನುವುದು ನಿಜಕ್ಕೂ ಮುಖ್ಯವಾಗುತ್ತದೆ.

[ಜಾಹೀರಾತು] ನಿಮ್ಮ ಆಯ್ಕೆಯ ಪೆನ್‌ಡ್ರೈವ್‌ ಅನ್ನು ಫ್ಲಿಪ್‌ಕಾರ್ಟ್‌ ಡಾಟ್ ಕಾಮ್‌ನಲ್ಲಿ ಕೊಳ್ಳಿ!

ಪೆನ್‌ಡ್ರೈವ್‌ಗೆ, ಅಥವಾ ಪೆನ್‌ಡ್ರೈವ್‌ನಿಂದ ಮಾಹಿತಿಯನ್ನು ಎಷ್ಟು ಕ್ಷಿಪ್ರವಾಗಿ ವರ್ಗಾಯಿಸಬಹುದು ಎನ್ನುವುದನ್ನು ಅದರ 'ಟ್ರಾನ್ಸ್‌ಫರ್ ಸ್ಪೀಡ್' ನಿರ್ಧರಿಸುತ್ತದೆ. ಕಡಿಮೆ ಬೆಲೆಯ ಸಾಧಾರಣ ಪೆನ್‌ಡ್ರೈವ್‌ಗಳಲ್ಲಿ ಈ ವೇಗ ಸಾಮಾನ್ಯವಾಗಿ ಕಡಿಮೆಯಿರುತ್ತದೆ.

ಪೆನ್‌ಡ್ರೈವ್‌ಗಳು ಮಾಹಿತಿ ವರ್ಗಾವಣೆಗೆ ಯೂನಿವರ್ಸಲ್ ಸೀರಿಯಲ್ ಬಸ್ (ಯುಎಸ್‌ಬಿ) ಬಳಸುತ್ತವೆಂದು ನಮಗೆಲ್ಲ ಗೊತ್ತೇ ಇದೆ. ನಮ್ಮ ಆಯ್ಕೆಯ ಪೆನ್‌ಡ್ರೈವ್‌ನಲ್ಲಿ ಈ ತಂತ್ರಜ್ಞಾನದ ಯಾವ ಆವೃತ್ತಿ ಬಳಕೆಯಾಗುತ್ತಿದೆ ಎನ್ನುವುದರ ಮೇಲೂ ಅದರ ಟ್ರಾನ್ಸ್‌ಫರ್ ರೇಟ್ ನಿರ್ಧಾರವಾಗುತ್ತದೆ. ಯುಎಸ್‌ಬಿ ೨.೦ ತಂತ್ರಜ್ಞಾನ ಬಳಸುವ ಪೆನ್‌ಡ್ರೈವ್‌ಗಳಿಗಿಂತ ಯುಎಸ್‌ಬಿ ೩.೦ ತಂತ್ರಜ್ಞಾನ ಬಳಸುವ ಪೆನ್‌ಡ್ರೈವ್‌ಗಳು ಮಾಹಿತಿಯನ್ನು ಹೆಚ್ಚು ಕ್ಷಿಪ್ರವಾಗಿ ವರ್ಗಾಯಿಸಲು ಶಕ್ತವಾಗಿರುತ್ತವೆ.

ಹೆಚ್ಚಿನ ಟ್ರಾನ್ಸ್‌ಫರ್ ರೇಟ್ ಉಪಯೋಗ ಪಡೆದುಕೊಳ್ಳಲು ನಮ್ಮ ಕಂಪ್ಯೂಟರಿನಲ್ಲೂ ಯುಎಸ್‌ಬಿ ೩.೦ ಪೋರ್ಟ್ ಅನ್ನೇ ಬಳಸಬೇಕಾಗುತ್ತದೆ ಎನ್ನುವುದು ಗಮನಿಸಬೇಕಾದ ಅಂಶ (ಯುಎಸ್‌ಬಿ ೩.೦ ಪೋರ್ಟ್‌ಗಳನ್ನು ಅವುಗಳ ನೀಲಿ ಬಣ್ಣದಿಂದ, ಅಥವಾ ಪೋರ್ಟ್ ಪಕ್ಕದಲ್ಲಿ ಬರೆದಿರುವ 'ಎಸ್‌ಎಸ್' - ಅಂದರೆ ಸೂಪರ್ ಸ್ಪೀಡ್ - ಚಿಹ್ನೆಯಿಂದ  ಗುರುತಿಸಬಹುದು). ಯುಎಸ್‌ಬಿ ೩.೦ ಪೆನ್‌ಡ್ರೈವ್‌ಗಳು ಹಳೆಯ ಯುಎಸ್‌ಬಿ ಪೋರ್ಟ್‌ಗಳಲ್ಲೂ ಕೆಲಸಮಾಡುತ್ತವೆ, ಆದರೆ ಮಾಹಿತಿ ವರ್ಗಾವಣೆಯ ವೇಗ ಕಡಿಮೆಯಿರುತ್ತದೆ ಅಷ್ಟೆ. ಯುಎಸ್‌ಬಿ ೩.೦ ಪೆನ್‌ಡ್ರೈವ್‌ಗಳ ಬೆಲೆ, ಸದ್ಯಕ್ಕೆ, ಸಾಮಾನ್ಯ ಪೆನ್‌ಡ್ರೈವ್‌ಗಳ ಬೆಲೆಗಿಂತ ಕೊಂಚ ಹೆಚ್ಚು.

ಮೊಬೈಲ್ ಹಾಗೂ ಟ್ಯಾಬ್ಲೆಟ್‌ಗಳ ಬಳಕೆ ಜಾಸ್ತಿಯಾದಂತೆ ಅವು ಕಂಪ್ಯೂಟರಿಗೆ ಪರ್ಯಾಯವಾಗಿ ಬಳಕೆಯಾಗುವ ನಿದರ್ಶನಗಳೂ ಹೆಚ್ಚುತ್ತಿವೆ. ಹಾಗಾಗಿ ಅವುಗಳಿಗೆ ಮಾಹಿತಿಯನ್ನು ವರ್ಗಾಯಿಸುವ ಹಾಗೂ ಅವುಗಳಲ್ಲಿರುವ ಮಾಹಿತಿಯನ್ನು ಹೊರತೆಗೆಯುವ ಅಗತ್ಯವೂ ಬೆಳೆದಿದೆ. ಈ ಅಗತ್ಯವನ್ನು ಪೆನ್‌ಡ್ರೈವ್‌ಗಳು ಸುಲಭವಾಗಿ ಪೂರೈಸುತ್ತಾವಾದರೂ ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲಿ ವ್ಯಾಪಕವಾಗಿ ಕಾಣಸಿಗುವ ಮೈಕ್ರೋ ಯುಎಸ್‌ಬಿ ಪೋರ್ಟ್‌ಗೆ ಸಾಮಾನ್ಯ ಪೆನ್‌ಡ್ರೈವ್‌ಗಳನ್ನು ಸಂಪರ್ಕಿಸುವುದು ಕಷ್ಟ. ಈ ಸಮಸ್ಯೆಗೆ ಪರಿಹಾರವಾಗಿ ಬೆಳೆದಿರುವುದೇ 'ಯುಎಸ್‌ಬಿ ಆನ್ ದ ಗೋ', ಅಥವಾ 'ಓಟಿಜಿ' ತಂತ್ರಜ್ಞಾನ. ಒಂದು ಬದಿಯಲ್ಲಿ ಮೈಕ್ರೋ ಯುಎಸ್‌ಬಿ  ಸಂಪರ್ಕವಿರುವ ಪುಟಾಣಿ ಕೇಬಲ್ಲಿನ ಇನ್ನೊಂದು ಬದಿಗೆ ಪೆನ್‌ಡ್ರೈವ್ (ಅಥವಾ ಯುಎಸ್‌ಬಿ ಬಳಸುವ ಇನ್ನಾವುದೇ ಸಾಧನ) ಜೋಡಿಸಲು ಈ ತಂತ್ರಜ್ಞಾನ ಅನುವುಮಾಡಿಕೊಡುತ್ತದೆ. ಹಾಂ, ಇಂತಹ ಓಟಿಜಿ ಕೇಬಲ್ ಮೂಲಕ ಪೆನ್‌ಡ್ರೈವ್ ಬಳಸುವ ಸೌಲಭ್ಯ ನಮ್ಮ ಮೊಬೈಲ್ ಅಥವಾ ಟ್ಯಾಬ್ಲೆಟ್ಟಿನಲ್ಲಿ ಇದ್ದರೆ ಮಾತ್ರ ಅದರ ಬಳಕೆ ಸಾಧ್ಯ.

ಪ್ರತ್ಯೇಕ ಓಟಿಜಿ ಕೇಬಲ್ ಬಳಸಲು ಇಷ್ಟವಿಲ್ಲದವರಿಗೆಂದು 'ಹೈಬ್ರಿಡ್ ಪೆನ್‌ಡ್ರೈವ್'ಗಳು ಮಾರುಕಟ್ಟೆಯಲ್ಲಿವೆ. ಈ ಪೆನ್‌ಡ್ರೈವ್‌ಗಳ ಒಂದು ಬದಿಯಲ್ಲಿ ಸಾಮಾನ್ಯ ಯುಎಸ್‌ಬಿ ಸಂಪರ್ಕ ಕಲ್ಪಿಸಬಹುದಾದರೆ ಇನ್ನೊಂದು ಬದಿಯಲ್ಲಿ ಮೈಕ್ರೋ ಯುಎಸ್‌ಬಿ ಸಂಪರ್ಕ ಕಲ್ಪಿಸುವುದು ಸಾಧ್ಯ. ಹಾಗಾಗಿ ಈ ಪೆನ್‌ಡ್ರೈವ್‌ಗಳನ್ನು ಕಂಪ್ಯೂಟರಿನಲ್ಲಿ ಬಳಸಿದಷ್ಟೇ ಸುಲಭವಾಗಿ ಮೊಬೈಲ್ ಅಥವಾ ಟ್ಯಾಬ್ಲೆಟ್ಟುಗಳಲ್ಲೂ ಬಳಸಬಹುದು. ಆದರೆ ಸಾಮಾನ್ಯ ಮಾದರಿಗಳಿಗಿಂತ ಹೆಚ್ಚಿನ ಬೆಲೆ ತೆತ್ತು ಇಂತಹ ಪೆನ್‌ಡ್ರೈವ್ ಕೊಳ್ಳುವ ಮೊದಲು ನಮ್ಮ ಮೊಬೈಲ್ ಅಥವಾ ಟ್ಯಾಬ್ಲೆಟ್ಟಿನ ಜೊತೆಗೆ ಅದರ ಬಳಕೆ ಸಾಧ್ಯವೇ ಎಂದು ಖಚಿತಪಡಿಸಿಕೊಳ್ಳುವುದು ಒಳಿತು.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

0 ಪ್ರತಿಕ್ರಿಯೆಗಳು:

Post a Comment