ಕಂಪ್ಯೂಟರ್ ಬಳಕೆ ಹೆಚ್ಚಿದಂತೆ ಅದರ ನೆರವಿನಿಂದ ಸೃಷ್ಟಿಯಾಗುವ ಮಾಹಿತಿಯ ಪ್ರಮಾಣವೂ ಜಾಸ್ತಿಯಾಗುತ್ತಲೇ ಇದೆ. ಹಾಗಿದ್ದಮೇಲೆ ನಾವು ಬಳಸುವ ಮಾಹಿತಿಯ ಪ್ರಮಾಣವೂ ಜಾಸ್ತಿಯಾಗಲೇಬೇಕಲ್ಲ!

ಕಚೇರಿಯ ಕೆಲಸ, ಶಾಲೆಯ ಹೋಮ್‌ವರ್ಕ್, ಸಿನಿಮಾ ಹಾಡು, ಹೊಸ ಕಾದಂಬರಿ, ಪ್ರವಾಸದ ಫೋಟೋ - ಬಹುತೇಕ ಎಲ್ಲವೂ ಈಗ ಕಂಪ್ಯೂಟರಿನ ಕಡತಗಳಾಗಿಬಿಟ್ಟಿರುವಾಗ ಈ ರೂಪದಲ್ಲಿರುವ ಮಾಹಿತಿಯನ್ನು ಜೊತೆಯಲ್ಲಿಟ್ಟುಕೊಂಡಿರುವುದು ಕೆಲವೊಮ್ಮೆ ಅನಿವಾರ್ಯವೂ ಹೌದು. ಹಾಗಾಗಿಯೇ ಪರ್ಸ್, ಕೀಚೈನ್, ಕರ್ಚೀಫುಗಳ ಜೊತೆಗೆ ಪೆನ್‌ಡ್ರೈವ್, ಮೆಮೊರಿ ಕಾರ್ಡ್, ಹಾರ್ಡ್ ಡಿಸ್ಕುಗಳೂ ನಮ್ಮ ಜೊತೆ ಕೊಂಡೊಯ್ಯುವ ವಸ್ತುಗಳ ಸಾಲಿಗೆ ಸೇರಿಕೊಂಡಿವೆ.

ನಮಗೆ ಅಗತ್ಯವಾದ ಮಾಹಿತಿಯನ್ನು ಶೇಖರಿಸಿಟ್ಟುಕೊಂಡು ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಕೊಂಡೊಯ್ಯಲು ಅನುವುಮಾಡಿಕೊಡುವ ಈ ಸಾಧನಗಳನ್ನು 'ರಿಮೂವಬಲ್ ಮೀಡಿಯಾ' ಎಂದು ಕರೆಯುವುದು ವಾಡಿಕೆ.

ಫ್ಲ್ಯಾಶ್ ಮೆಮೊರಿ ಒಂದು ಕಾಲದಲ್ಲಿ ಕಂಪ್ಯೂಟರ್ ಬಳಕೆದಾರರ ಸಂಗಾತಿಗಳಾಗಿದ್ದ ಫ್ಲಾಪಿಗಳು, ಸಿಡಿ-ಡಿವಿಡಿಗಳು ಇದೇ ಕೆಲಸವನ್ನು ಮಾಡುತ್ತಿದ್ದವು ನಿಜ. ಆದರೆ ಈಗ ಫ್ಲಾಪಿಗಳನ್ನು ಕೇಳುವವರೇ ಇಲ್ಲ, ಸಿಡಿ-ಡಿವಿಡಿಗಳಿಗೂ ಬೇಡಿಕೆ ಕಡಿಮೆ. ಈಗೇನಿದ್ದರೂ ಫ್ಲ್ಯಾಶ್ ಮೆಮೊರಿಯ ಕಾಲ. ಪೆನ್‌ಡ್ರೈವ್‌ಗಳು, ಮೆಮೊರಿ ಕಾರ್ಡುಗಳೆಲ್ಲ ಬಳಸುವುದು ಇದೇ ತಂತ್ರಜ್ಞಾನವನ್ನು.

ಕಂಪ್ಯೂಟರಿನ ರಾಮ್ (ರೀಡ್ ಓನ್ಲಿ ಮೆಮೊರಿ) ಬಗ್ಗೆ ಕೇಳಿದ್ದೇವಲ್ಲ, ಫ್ಲ್ಯಾಶ್ ಮೆಮೊರಿಯಲ್ಲಿ ಬಳಕೆಯಾಗುವುದು ಇದೇ ರೀಡ್ ಓನ್ಲಿ ಮೆಮೊರಿಯ ಇನ್ನೊಂದು ರೂಪ. ಇಲೆಕ್ಟ್ರಾನಿಕಲಿ ಇರೇಸಬಲ್ ಪ್ರೋಗ್ರಾಮಬಲ್ ರೀಡ್ ಓನ್ಲಿ ಮೆಮೊರಿ, ಅಂದರೆ 'ಇಇಪಿ-ರಾಮ್' ಎಂಬ ಹೆಸರಿನ ಈ ಚಿಪ್‌ನಲ್ಲಿ ಶೇಖರವಾಗಿರುವ ಮಾಹಿತಿಯನ್ನು ಅಳಿಸಿ ಮತ್ತೆಮತ್ತೆ ಬೇರೆಯ ಮಾಹಿತಿಯನ್ನು ಸೇರಿಸಬಹುದು ಎನ್ನುವುದು ವಿಶೇಷ. ಕಂಪ್ಯೂಟರಿನ ರಾಮ್‌ಗೂ, ಫ್ಲ್ಯಾಶ್ ಮೆಮೊರಿಗೂ ಇರುವ ಬಹುದೊಡ್ಡ ವ್ಯತ್ಯಾಸವೂ ಇದೇ.

ಹಿಂದಿನ ಫ್ಲಾಪಿ ಡಿಸ್ಕ್ ಹಾಗೂ ಇಂದಿನ ಹಾರ್ಡ್‌ಡಿಸ್ಕ್‌ನಂತೆ ಇಲ್ಲಿ ಯಾವುದೇ ತಿರುಗುವ ಭಾಗಗಳಿಲ್ಲ, ಹಾಗಾಗಿ ಶಬ್ದವೂ ಇಲ್ಲ; ಯಾಂತ್ರಿಕ ವೈಫಲ್ಯದ ಸಾಧ್ಯತೆಯೂ ಕೊಂಚ ಕಡಿಮೆಯೇ ಎನ್ನಬಹುದು. ಇತರ ಮಾಧ್ಯಮಗಳಿಗೆ ಹೋಲಿಸಿದಾಗ ಮಾಹಿತಿ ವರ್ಗಾವಣೆಯ ವೇಗ ಜಾಸ್ತಿ. ಎಲ್ಲದಕ್ಕಿಂತ ಮಿಗಿಲಾಗಿ ಗಾತ್ರ ತೂಕ ಎರಡೂ ಕಡಿಮೆ. ಕಂಪ್ಯೂಟರ್ ಬಳಕೆದಾರರ ನಡುವೆ ಭಾರೀ ಜನಪ್ರಿಯತೆ ಗಳಿಸಿಕೊಳ್ಳಲು ಬೇರೇನು ಬೇಕು?

ಪೆನ್ ಡ್ರೈವ್ ಸಾಮಾನ್ಯ ಬಳಕೆದಾರರ ನಡುವೆ ಅತ್ಯಂತ ಜನಪ್ರಿಯವಾಗಿರುವ ಫ್ಲ್ಯಾಶ್ ಮೆಮೊರಿಯ ಅವತಾರ ಪೆನ್ ಡ್ರೈವ್ ಎಂದೇ ಹೇಳಬಹುದು. ಸಣ್ಣ ಗಾತ್ರದ ಈ ಸಾಧನದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಮಾಹಿತಿಯನ್ನು ಶೇಖರಿಸುವುದು, ನಮ್ಮೊಡನೆ ಕೊಂಡೊಯ್ಯುವುದು, ಬೇರೆಬೇರೆ ಕಡೆಗಳಲ್ಲಿ ಬಳಸುವುದು ಬಹಳ ಸುಲಭ. ಇದು ಯುಎಸ್‌ಬಿ ಸಂಪರ್ಕ ಬಳಸುವುದರಿಂದ ಬರಿಯ ಕಂಪ್ಯೂಟರ್ ಅಷ್ಟೇ ಅಲ್ಲದೆ ಮ್ಯೂಸಿಕ್ ಸಿಸ್ಟಂ, ಟೀವಿ, ಡಿವಿಡಿ ಪ್ಲೇಯರ್ ಇತ್ಯಾದಿ ಹಲವಾರು ಪರಿಕರಗಳ ಜೊತೆಗೆ ಪೆನ್ ಡ್ರೈವ್ ಬಳಕೆ ಸಾಧ್ಯ.

ಈಚಿನ ವರ್ಷಗಳಲ್ಲಿ ಪೆನ್ ಡ್ರೈವ್‌ಗಳ ಬೆಲೆ ಸಾಕಷ್ಟು ಕಡಿಮೆಯಾಗಿರುವುದರಿಂದ ಅದರ ಖರೀದಿ - ಬಳಕೆ ಎರಡೂ ತೀರಾ ಸಾಮಾನ್ಯ ಸಂಗತಿಗಳಾಗಿಬಿಟ್ಟಿವೆ. ನಮ್ಮ ಅಗತ್ಯಕ್ಕೆ ತಕ್ಕಷ್ಟು ಶೇಖರಣಾ ಸಾಮರ್ಥ್ಯವಿದ್ದು ನಮ್ಮ ಜೇಬಿನ ಸಾಮರ್ಥ್ಯಕ್ಕೆ ಹೊಂದುವಂತಿದ್ದರೆ ಆ ಪೆನ್ ಡ್ರೈವ್ ಅನ್ನು ಥಟ್ಟನೆ ಖರೀದಿಸಲು ನಾವು ಹಿಂದೆಮುಂದೆ ನೋಡುವುದಿಲ್ಲ.

ಆದರೆ ಪೆನ್ ಡ್ರೈವ್ ಖರೀದಿಯಲ್ಲೂ ನಾವು ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳಿವೆ.

[ಜಾಹೀರಾತು] ನಿಮ್ಮ ಆಯ್ಕೆಯ ಪೆನ್‌ಡ್ರೈವ್‌ ಅನ್ನು ಫ್ಲಿಪ್‌ಕಾರ್ಟ್‌ ಡಾಟ್ ಕಾಮ್‌ನಲ್ಲಿ ಕೊಳ್ಳಿ!

ಆಯ್ಕೆ ಹೇಗೆ? ನಮ್ಮ ಆಯ್ಕೆಯ ಪೆನ್‌ಡ್ರೈವ್‌ನಲ್ಲಿರಬೇಕಾದ ಶೇಖರಣಾಸಾಮರ್ಥ್ಯ ಈ ಪೈಕಿ ಮೊದಲನೆಯದು. ನಾವು ಸಾಮಾನ್ಯವಾಗಿ ಬಳಸುವ ಕಡತಗಳನ್ನೆಲ್ಲ ಸಂಗ್ರಹಿಸಿಟ್ಟುಕೊಳ್ಳುವ ಕನಿಷ್ಠ ಸಾಮರ್ಥ್ಯವಾದರೂ ನಮ್ಮ ಪೆನ್‌ಡ್ರೈವ್‌ನಲ್ಲಿರಬೇಕು. ಬಜೆಟ್ ಹೊಂದಿಕೆಯಾಗುವುದಾದರೆ ಕೊಂಚ ಹೆಚ್ಚಿನ ಸಾಮರ್ಥ್ಯವೂ ಒಳ್ಳೆಯದೇ. ಆದರೆ ಬಹಳ ಹೆಚ್ಚಿನ ಸಾಮರ್ಥ್ಯದ (ಉದಾ: ೬೪ ಜಿಬಿ) ಪೆನ್‌ಡ್ರೈವ್‌ಗಳ ಬೆಲೆ ಅದಕ್ಕಿಂತ ಕಡಿಮೆ ಸಾಮರ್ಥ್ಯದವುಗಳ ಹೋಲಿಕೆಯಲ್ಲಿ ದುಬಾರಿಯಾಗಿರುತ್ತದೆ. ಹಾಗಾಗಿ ಅಷ್ಟೆಲ್ಲ ದೊಡ್ಡ ಗಾತ್ರದ ಕಡತಗಳೇನೂ ಇಲ್ಲದ ಸಂದರ್ಭದಲ್ಲಿ ಹೆಚ್ಚು ಸಾಮರ್ಥ್ಯದ ಒಂದು ಪೆನ್‌ಡ್ರೈವ್ ಬದಲಿಗೆ ಕೊಂಚ ಕಡಿಮೆ ಸಾಮರ್ಥ್ಯದ (ಉದಾ: ೩೨ ಅಥವಾ ೧೬ ಜಿಬಿ) ಸಾಮರ್ಥ್ಯದ ಎರಡು ಪೆನ್‌ಡ್ರೈವ್‌ಗಳ ಖರೀದಿ ಬೆಲೆ ಹಾಗೂ ಕಾರ್ಯಕ್ಷಮತೆ ಎರಡರ ದೃಷ್ಟಿಯಲ್ಲೂ ಉತ್ತಮ ಆಯ್ಕೆಯಾಗಬಲ್ಲದು.

ಪೆನ್‌ಡ್ರೈವ್ ಖರೀದಿಯಲ್ಲಿ ಮೋಸವಾಗುವುದನ್ನು ತಪ್ಪಿಸಲು ಪ್ರತಿಷ್ಠಿತ ಬ್ರಾಂಡುಗಳನ್ನು ವಿಶ್ವಾಸಾರ್ಹ ಅಂಗಡಿಗಳಿಂದಲಷ್ಟೆ ಕೊಳ್ಳುವುದು ಒಳ್ಳೆಯದು. ಹಲವಾರು ಮಾದರಿಯ, ಆಕಾರಗಳ ಪೆನ್‌ಡ್ರೈವ್‌ಗಳು ಮಾರುಕಟ್ಟೆಯಲ್ಲಿರುವುದರಿಂದ ಅವುಗಳ ಪೈಕಿ ಸೂಕ್ತವಾದುದನ್ನು ಆರಿಸಿಕೊಳ್ಳುವುದೂ ಮುಖ್ಯ. ತೀರಾ ಸಣ್ಣದಾದ ಅಥವಾ ಬಳಸಲು-ಕೊಂಡೊಯ್ಯಲು ಸೂಕ್ತವಲ್ಲದ ವಿನ್ಯಾಸಗಳು ಅಷ್ಟೇನೂ ಒಳ್ಳೆಯ ಆಯ್ಕೆಯಾಗಲಾರವು. ಸದಾಕಾಲ ಬ್ಯಾಗಿನಲ್ಲೋ ಜೇಬಿನಲ್ಲೋ ಇಟ್ಟುಕೊಂಡಿರುವುದಾದರೆ ಪೆನ್ ಡ್ರೈವ್ ರಚನೆ ಸಾಕಷ್ಟು ದೃಢವಾಗಿರಬೇಕಾದ್ದೂ ಅಗತ್ಯವೇ.

ಕಾರು, ಕ್ಯಾಮೆರಾ, ಕಾರ್ಟೂನು - ಹೀಗೆ ಬೇರೆಬೇರೆ ಆಕಾರದ ಪೆನ್‌ಡ್ರೈವ್‌ಗಳೂ ಸಿಗುತ್ತವೆ. ಆದರೆ ಅವುಗಳ ಬೆಲೆ ಅಷ್ಟೇ ಸಾಮರ್ಥ್ಯದ ಸಾಮಾನ್ಯ ಪೆನ್‌ಡ್ರೈವ್‌ಗಳಿಗಿಂತ ಸಾಕಷ್ಟು ಹೆಚ್ಚಿರುತ್ತದೆ ಎನ್ನುವುದು ಗಮನಾರ್ಹ.

ಇಷ್ಟೆಲ್ಲದರ ಜೊತೆಗೆ ಪೆನ್‌ಡ್ರೈವ್‌ನ ಒಳಗೂ ಹೊರಕ್ಕೂ ಮಾಹಿತಿ ಎಷ್ಟು ವೇಗವಾಗಿ ವರ್ಗಾವಣೆಯಾಗುತ್ತದೆ ಎನ್ನುವುದೂ ಬಹಳ ಮುಖ್ಯ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ಲೇಖನದಲ್ಲಿ ನೋಡೋಣ.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

0 ಪ್ರತಿಕ್ರಿಯೆಗಳು:

Post a Comment