ಬೇಸಿಗೆಯ ಬಿಸಿ ಏರುತ್ತಿದ್ದಂತೆ ಬೆವರಿನ ಧಾರೆ ಜೋರು. ಹೆಚ್ಚೂಕಡಿಮೆ ಇಪ್ಪತ್ತನಾಲ್ಕು ಗಂಟೆಯೂ ಫ್ಯಾನ್ ತಿರುಗುತ್ತಲೇ ಇರಬೇಕು. ಆದರೆ ಬಿಸಿಲು ಹೆಚ್ಚುತ್ತಾ ಹೋದಂತೆ ಅದರ ಝಳದಿಂದ ಪಾರಾಗಲು ಫ್ಯಾನ್ ಸಹಾಯವಷ್ಟೇ ಸಾಕಾಗುವುದಿಲ್ಲ.

ಆಗ ನಮ್ಮ ನೆರವಿಗೆ ಬರುವುದು ಏರ್ ಕಂಡೀಶನರ್, ಅಂದರೆ ಏಸಿ. ಬಿರುಬೇಸಿಗೆಯಲ್ಲೂ ಮನೆಯನ್ನು ತಣ್ಣಗಿಟ್ಟುಕೊಳ್ಳಬೇಕಾದರೆ ಏಸಿ ಇರಲೇಬೇಕು ಎನ್ನುವ ಅಭಿಪ್ರಾಯವನ್ನು ನಾವು ವ್ಯಾಪಕವಾಗಿ ಕೇಳಬಹುದು.

ಈ ಅಭಿಪ್ರಾಯದಲ್ಲಿ ನಿಜ ಎಷ್ಟಿದೆಯೋ ಏನೋ, ಆದರೆ ಏಸಿ ಬೇಡಿಕೆಯಂತೂ ಹೆಚ್ಚುತ್ತಲೇ ಇದೆ. ಮನೆಗಳಲ್ಲಿ ಏರ್ ಕಂಡೀಶನರ್ ಇರುವುದು ಪ್ರತಿಷ್ಠೆಯ ಸಂಕೇತವಾಗಿದ್ದ ಕಾಲ ಹೋಗಿ ಈಗ ಮನೆಯಲ್ಲಿರಬೇಕಾದ ಪರಿಕರಗಳಲ್ಲಿ ಅದೂ ಒಂದು ಎನ್ನುವಂತೆ ಆಗಿದೆ.

ಮಾರುಕಟ್ಟೆಯಲ್ಲಿರುವ ಬೇರೆಲ್ಲ ಪರಿಕರಗಳಂತೆ ಏರ್ ಕಂಡೀಶನರುಗಳಲ್ಲೂ ನಾವು ಹಲವಾರು ವಿಧಗಳನ್ನು ಕಾಣಬಹುದು. ಇವುಗಳಲ್ಲಿ ನಮಗೆ ಸೂಕ್ತವಾದುದನ್ನು ಆರಿಸಿಕೊಳ್ಳುವ ಮೊದಲು ಹಲವಾರು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ನಾವು ಕೊಳ್ಳುವ ಏಸಿ ಮನೆಯ ಎಷ್ಟು ಪ್ರದೇಶವನ್ನು ತಣ್ಣಗಿಡಬೇಕು ಎನ್ನುವುದು ಇಂತಹ ಅಂಶಗಳ ಪೈಕಿ ಪ್ರಮುಖವಾದದ್ದು.

* * *

ಒಂದೇ ಕೋಣೆಯನ್ನು ತಣ್ಣಗಿರಿಸುವ ಉದ್ದೇಶವಿದ್ದರೆ ನಮ್ಮ ಮುಂದೆ ನಿಲ್ಲುವ ಮೊದಲ ಆಯ್ಕೆ ವಿಂಡೋ ಏಸಿಯದು. ಹೆಸರೇ ಹೇಳುವಂತೆ ಇದನ್ನು ಕೋಣೆಯ ಕಿಟಕಿಗೆ ಸುಲಭವಾಗಿ ಜೋಡಿಸಬಹುದು. ಏಸಿಯ ಎಲ್ಲ ಅಂಗಗಳೂ ಒಂದೇ ಪೆಟ್ಟಿಗೆಯೊಳಗೆ ಇರುವುದರಿಂದ ಪೆಟ್ಟಿಗೆಯ ದಪ್ಪ ಜಾಸ್ತಿ - ಕಿಟಕಿಯಿಂದಾಚೆ ಚಾಚಿಕೊಳ್ಳುವುದು ಸಾಮಾನ್ಯ; ಶಬ್ದವೂ ಕೊಂಚ ಜಾಸ್ತಿಯೇ. ಆದರೆ ಈ ಬಗೆಯ ಏಸಿಯ ಜೋಡಣೆ - ನಿರ್ವಹಣೆ ಎರಡೂ ಸುಲಭ, ಇತರ ಮಾದರಿಗಳ ಹೋಲಿಕೆಯಲ್ಲಿ ಬೆಲೆಯೂ ಕಡಿಮೆ.

ಒಂದೇ ಪೆಟ್ಟಿಗೆಯೊಳಗಿರುವ ವಿಂಡೋ ಏಸಿ ಬೇಡ ಎನ್ನುವವರು ಸ್ಪ್ಲಿಟ್ ಏಸಿಯ ಮೊರೆಹೋಗಬಹುದು. ಹೆಸರಿನಲ್ಲಿರುವಂತೆ ಇದರಲ್ಲಿ ಎರಡು ಭಾಗಗಳಿರುತ್ತವೆ: ಮನೆಯೊಳಗಿರುವ ಭಾಗ ಒಂದು, ಹೊರಗಿನದು ಇನ್ನೊಂದು. ಕಂಪ್ರೆಸರ್ ಇತ್ಯಾದಿಗಳೆಲ್ಲ ಇರುವ ಎರಡನೆಯ ಭಾಗವನ್ನು ಮನೆಯಿಂದಾಚೆ ಜೋಡಿಸುವುದು ಸಾಧ್ಯವಾದ್ದರಿಂದ ಸಣ್ಣದಾದ, ನೋಡಲೂ ಚೆನ್ನಾಗಿರುವ ಭಾಗವನ್ನಷ್ಟೇ ಮನೆಯೊಳಗೆ ಇಟ್ಟುಕೊಂಡರೆ ಸಾಕು. ಕಿಟಕಿಯೇ ಬೇಕು ಎಂದೇನೂ ಇಲ್ಲ, ಜಾಸ್ತಿ ಶಬ್ದವೂ ಇಲ್ಲ. ಆದರೆ ಬೆಲೆ ಮಾತ್ರ ವಿಂಡೋ ಏಸಿಗಿಂತ ಕೊಂಚ ದುಬಾರಿ.

ಸ್ಪ್ಲಿಟ್ ಏಸಿಯ ಮನೆಯೊಳಗಿನ ಭಾಗವನ್ನು ಗೋಡೆಗೆ ಜೋಡಿಸಲು ಇಷ್ಟವಿಲ್ಲದವರಿಗೆಂದು ಟವರ್ ಏಸಿ ಎಂಬ ಮಾದರಿ ಕೂಡ ಇದೆ. ಹೆಚ್ಚಾಗಿ ದೊಡ್ಡ ಕೋಣೆಗಳಿಗೆ ಸೂಕ್ತವಾದ ಈ ಮಾದರಿಯನ್ನು ಕೋಣೆಯ ಮೂಲೆಯಲ್ಲೊಂದು ಕಡೆ ನಿಲ್ಲಿಸಿದರೆ ಸಾಕು.

ಅಷ್ಟೇ ಅಲ್ಲ, ಛಾವಣಿಗೆ ಜೋಡಿಸಬಹುದಾದ 'ಕ್ಯಾಸೆಟ್ ಏಸಿ' ಹಾಗೂ ಸ್ಪ್ಲಿಟ್ ಏಸಿಗಿಂತ ಸಣ್ಣದಾದ 'ಕ್ಯೂಬ್ ಏಸಿ' ಎನ್ನುವ ಮಾದರಿಗಳೂ ಇವೆ. ಸಾಂಪ್ರದಾಯಿಕ ಮಾದರಿಯ ಏಸಿಗಳಿಗಿಂತ ಕಡಿಮೆ ಸ್ಥಳಾವಕಾಶ ಬೇಡುವುದು ಇವುಗಳ ವೈಶಿಷ್ಟ್ಯ.

ಒಂದೊಂದು ಕೋಣೆಯನ್ನಷ್ಟೆ ತಣ್ಣಗಿಡಲು ಈ ಮಾದರಿಗಳ ಬಳಕೆಯೇನೋ ಸರಿ. ಆದರೆ ಮನೆಯ ಎಲ್ಲ ಕೋಣೆಗಳೂ ತಣ್ಣಗಿರಬೇಕು ಎನ್ನುವವರು ಒಂದೊಂದು ಕೋಣೆಗೆ ಒಂದೊಂದು ಏಸಿ ಕೊಳ್ಳುವ ಬದಲು ಇಡೀ ಮನೆಗೆ ಸೇರಿದಂತೆ ಒಂದೇ ಏಸಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಸಾಧ್ಯ. 'ಸೆಂಟ್ರಲ್ ಏಸಿ' ಎಂದು ಕರೆಯುವುದು ಇದನ್ನೇ.

* * *

ಏರ್ ಕಂಡೀಶನರುಗಳು ಬಿಸಿಲಿನ ಧಗೆಯಿಂದ ನಮ್ಮನ್ನು ಪಾರುಮಾಡುವುದು ನಿಜವೇ ಆದರೂ ಅವುಗಳಲ್ಲಿ ಕೆಲವು ಕೊರತೆಗಳೂ ಇವೆ. ಮೊದಲಿಗೆ ಅವುಗಳ ಬೆಲೆ ಸಾಮಾನ್ಯರಿಗೆ ಕೊಂಚ ದುಬಾರಿಯೆನಿಸುವಂತಿರುತ್ತದೆ. ಕೊಂಡ ನಂತರವೂ ಅಷ್ಟೆ, ಅವು ಹೆಚ್ಚಿನ ವಿದ್ಯುತ್ ಬಳಸುವುದರಿಂದ ಕರೆಂಟ್ ಬಿಲ್ ಮೊತ್ತವೂ ಹೆಚ್ಚುತ್ತದೆ (ಬ್ಯೂರೋ ಆಫ್ ಎನರ್ಜಿ ಎಫಿಶಿಯೆನ್ಸಿಯಿಂದ ೫ ಸ್ಟಾರ್ ರೇಟಿಂಗ್ ಪಡೆದ ಉತ್ಪನ್ನಗಳು ಉಳಿದ ಮಾದರಿಗಳಿಗಿಂತ ಕಡಿಮೆ ವಿದ್ಯುತ್ ಬಳಸುತ್ತವೆ).

ಇದಕ್ಕಿಂತ ಮುಖ್ಯವಾದ ಅಂಶವೆಂದರೆ ಪರಿಸರದ ಮೇಲೆ ಅವುಗಳ ಪ್ರಭಾವ. ಈ ಹಿಂದೆ ಏಸಿಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದ್ದ ಕ್ಲೋರೋಫ್ಲೋರೋಕಾರ್ಬನ್‌ಗಳು (ಸಿಎಫ್‌ಸಿ) ಓಜೋನ್ ಪದರದ ಮೇಲೆ ಉಂಟುಮಾಡುತ್ತಿದ್ದ ದುಷ್ಪರಿಣಾಮದ ಬಗ್ಗೆ ನಾವು ಕೇಳಿಯೇ ಇದ್ದೇವೆ. ೧೯೮೭ರ ಮಾಂಟ್ರಿಯಲ್ ಶಿಷ್ಟಾಚಾರದ ಅನ್ವಯ ಸಿಎಫ್‌ಸಿಗಳ ಬಳಕೆ ಕಡಿಮೆಯಾಗಿದೆಯಾದರೂ ಅವುಗಳ ಬದಲಿಗೆ ಬಳಕೆಯಾಗುತ್ತಿರುವ ಅನಿಲಗಳು ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕೊಡುಗೆ ನೀಡುತ್ತಿವೆ. ಸಿಎಫ್‌ಸಿಗಳಿಗಿಂತ ಕಡಿಮೆ ಹಾನಿಕಾರಕವೆಂದು ಬಳಕೆಗೆ ಬಂದ ಹೈಡ್ರೋಕ್ಲೋರೋಫ್ಲೋರೋಕಾರ್ಬನ್‌ಗಳ (ಎಚ್‌ಸಿಎಫ್‌ಸಿ) ಬಳಕೆ ಭಾರತದಂತಹ ದೇಶಗಳಲ್ಲಿ ಇನ್ನೂ ನಿಂತಿಲ್ಲವಾದ್ದರಿಂದ ಓಜೋನ್ ಪದರಕ್ಕೆ ತೊಂದರೆಯೂ ಪೂರ್ತಿಯಾಗಿ ತಪ್ಪಿಲ್ಲ.

* * *

ಬಜೆಟ್ಟಿಗೆ ನಿಲುಕದೆಂದೋ ಪರಿಸರ ಸ್ನೇಹಿಯಲ್ಲವೆಂದೋ ಏಸಿ ಬಳಸದಿರುವವರಿಗೆ ಫ್ಯಾನ್ ಜೊತೆಗೆ ಕಾಣಸಿಗುವ ಇನ್ನೊಂದು ಆಯ್ಕೆ ಏರ್ ಕೂಲರ್‌ಗಳದ್ದು. ನಾವು ತುಂಬಿಸಿದ ನೀರನ್ನು ಬಳಸಿ ನಮ್ಮ ಕೋಣೆಯನ್ನು ತಣ್ಣಗಿಡುವ ಏರ್ ಕೂಲರುಗಳ ಬೆಲೆ ಏಸಿಗಳಿಗೆ ಹೋಲಿಸಿದಾಗ ಬಹಳ ಕಡಿಮೆ. ಬಹುತೇಕ ಏರ್ ಕೂಲರುಗಳಿಗೆ ಗಾಲಿಗಳೂ ಇರುವುದರಿಂದ ಅವನ್ನು ಮನೆಯಲ್ಲಿ ಎಲ್ಲಿ ಬೇಕಾದರೂ ಬಳಸಬಹುದು.

ಕೂಲರಿಗೆ ನೀರು ತುಂಬುವ ರೇಜಿಗೆಯೆಲ್ಲ ಬೇಡವೆನ್ನುವವರು ಟವರ್ ಫ್ಯಾನುಗಳನ್ನೂ ಕೊಳ್ಳಬಹುದು. ಸಾಮಾನ್ಯ ಫ್ಯಾನುಗಳಿಗಿಂತ ಭಿನ್ನವಾದ ರೆಕ್ಕೆಗಳು ಹಾಗೂ ಹೆಚ್ಚು ಪ್ರದೇಶಕ್ಕೆ ಗಾಳಿಯನ್ನು ತಲುಪಿಸುವ ಸಾಮರ್ಥ್ಯ ಈ ಫ್ಯಾನುಗಳ ವೈಶಿಷ್ಟ್ಯ.
--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

0 ಪ್ರತಿಕ್ರಿಯೆಗಳು:

Post a Comment