ಮೊಬೈಲ್ ಫೋನ್ ಎಂದ ತಕ್ಷಣ ನಮಗೆ ಆಂಡ್ರಾಯ್ಡ್, ವಿಂಡೋಸ್, ಐಓಎಸ್ ಮುಂತಾದ ಹೆಸರುಗಳೆಲ್ಲ ನೆನಪಾಗುತ್ತವೆ. ಮೊಬೈಲ್ ಫೋನೆಂದರೆ ಅದು ಸ್ಮಾರ್ಟ್ ಫೋನ್ ಆಗಿರಲೇಬೇಕು ಎನ್ನುವ ಅನಿಸಿಕೆ ನಮ್ಮಲ್ಲಿ ಅನೇಕರದು.

ಆದರೆ ಅಂಕಿ-ಅಂಶಗಳು ಹೇಳುವ ವಿಷಯವೇ ಬೇರೆ. 'ನೀಲ್ಸನ್ ಇನ್ಫರ್‌ಮೇಟ್ ಮೊಬೈಲ್ ಇನ್‌ಸೈಟ್ಸ್' ವರದಿಯ ಪ್ರಕಾರ ನಮ್ಮ ದೇಶದಲ್ಲಿ ಬಳಕೆಯಾಗುತ್ತಿರುವ ಮೊಬೈಲ್ ಫೋನುಗಳ ಪೈಕಿ 'ಸ್ಮಾರ್ಟ್' ಆಗಿರುವವು ಶೇ. ೧೮ರಷ್ಟು ಮಾತ್ರ.

ಅಂದರೆ, ಭಾರತದ ಮೊಬೈಲ್ ಬಳಕೆದಾರರ ಪೈಕಿ ಬಹುಪಾಲು ಜನರು ಸ್ಮಾರ್ಟ್‌ಫೋನ್ ಬಳಕೆದಾರರಲ್ಲ ಎಂದಾಯಿತು. ಅವರೆಲ್ಲ ಇಂದಿಗೂ ಬಳಸುವುದು ಸಾಮಾನ್ಯ ಫೋನುಗಳನ್ನು.

ಸ್ಮಾರ್ಟ್ ಫೋನ್‌ಗೂ ಸ್ಮಾರ್ಟ್ ಅಲ್ಲದ ಫೋನುಗಳಿಗೂ ವ್ಯತ್ಯಾಸ ಇಂಥದ್ದೇ ಎಂದು ನಿಖರವಾಗಿ ಹೇಳುವುದು ಕಷ್ಟ; ಸ್ಮಾರ್ಟ್‌ಫೋನುಗಳನ್ನು ಅಂಗೈಯಲ್ಲಿನ ಕಂಪ್ಯೂಟರಿನಂತೆ ಬಳಸುತ್ತೇವಲ್ಲ, ಸ್ಮಾರ್ಟ್ ಅಲ್ಲದವನ್ನು ಹಾಗೆ ಬಳಸಲು ಸಾಧ್ಯವಿಲ್ಲ ಎನ್ನಬಹುದೇನೋ.

ಹೀಗಿದ್ದರೂ ಕಡಿಮೆ ಬೆಲೆ ಹಾಗೂ ತೀರಾ ಸರಳ ವಿನ್ಯಾಸದಿಂದಾಗಿ ಸಾಮಾನ್ಯ ಫೋನುಗಳು ಇಂದಿಗೂ ಬಹಳಷ್ಟು ಬಳಕೆದಾರರಿಗೆ ಆಪ್ತವಾಗುತ್ತವೆ. ದೂರವಾಣಿ ಕರೆಮಾಡುವ ಮತ್ತು ಎಸ್ಸೆಮ್ಮೆಸ್ ಕಳುಹಿಸುವ ಸೌಲಭ್ಯವಿದ್ದರೆ ಸಾಕು, ಸ್ಮಾರ್ಟ್‌ಫೋನಿನಲ್ಲಿರುವ ಬೇರೆಲ್ಲ ಸಂಗತಿಗಳ ಗೊಡವೆಯೇ ಬೇಡ ಎನ್ನುವವರಿಗೆ ಸಾಮಾನ್ಯ ಫೋನುಗಳೇ ಅತ್ಯುತ್ತಮ ಆಯ್ಕೆಯೂ ಹೌದು. ಒಮ್ಮೆ ಚಾರ್ಜ್ ಮಾಡಿದ ಬ್ಯಾಟರಿ ದೀರ್ಘಸಮಯ ಬಾಳಿಕೆ ಬರುವುದು ಈ ಫೋನುಗಳಲ್ಲಿ ಸಾಮಾನ್ಯ. ಬರಿಯ ಬ್ಯಾಟರಿಯಷ್ಟೇ ಅಲ್ಲ, ಸಾಕಷ್ಟು ಗಟ್ಟಿಮುಟ್ಟಾಗಿರುವ ಈ ಫೋನುಗಳೂ ಸಾಕಷ್ಟು ಸಮಯ ಬಾಳಿಕೆ ಬರುತ್ತವೆ.

ಹಾಗೆಂದಮಾತ್ರಕ್ಕೆ ಸಾಮಾನ್ಯ ಫೋನುಗಳಲ್ಲಿ ಅಂತರಜಾಲ ಸಂಪರ್ಕ ಪಡೆದುಕೊಳ್ಳುವುದಾಗಲಿ, ಫೋಟೋ ತೆಗೆಯುವುದಾಗಲಿ,  ಫೇಸ್‌ಬುಕ್ ಇತ್ಯಾದಿಗಳನ್ನು ಬಳಸುವುದಾಗಲಿ ಅಸಾಧ್ಯ ಎಂದೇನೂ ಇಲ್ಲ. ಇಂತಹ ಸೌಲಭ್ಯಗಳೆಲ್ಲ ಇರುವ, ಆದರೆ ಸ್ಮಾರ್ಟ್‌ಫೋನ್ ಅಲ್ಲದ ಮೊಬೈಲುಗಳೂ ಇವೆ.

ಫೀಚರ್ ಫೋನುಗಳೆಂದು ಕರೆಸಿಕೊಳ್ಳುವ ಈ ಮೊಬೈಲುಗಳು ಸ್ಮಾರ್ಟ್‌ಫೋನುಗಳಿಗೆ ಸರಿಸಮನಾದ ಸೌಲಭ್ಯಗಳನ್ನು - ಟಚ್‌ಸ್ಕ್ರೀನ್ ಕೂಡ ಸೇರಿದಂತೆ - ಅಷ್ಟೇನೂ ದುಬಾರಿಯೆನಿಸದ ಬೆಲೆಗಳಲ್ಲೇ ನೀಡುತ್ತವೆ. ಆಂಡ್ರಾಯ್ಡ್, ವಿಂಡೋಸ್, ಐಓಎಸ್ ಮುಂತಾದ ಕಾರ್ಯಾಚರಣ ವ್ಯವಸ್ಥೆಗಳನ್ನು (ಆಪರೇಟಿಂಗ್ ಸಿಸ್ಟಂ) ಬಳಸುವ ಫೋನುಗಳಲ್ಲಿ ದೊರಕುವಷ್ಟು ಸಂಖ್ಯೆಯ ಸೌಲಭ್ಯಗಳು - ವಿಶೇಷವಾಗಿ ಆಪ್‌ಗಳು - ಫೀಚರ್ ಫೋನುಗಳಲ್ಲಿ ದೊರಕುವುದಿಲ್ಲವಾದರೂ ಅಂತರಜಾಲ ಸಂಪರ್ಕ ಬಳಸುವುದಕ್ಕೆ, ಫೇಸ್‌ಬುಕ್ ಇತ್ಯಾದಿಗಳನ್ನು ನೇರವಾಗಿ ಉಪಯೋಗಿಸುವುದಕ್ಕೆ, ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ ಪಡೆಯುವುದಕ್ಕೆಲ್ಲ ಏನೂ ಕೊರತೆಯಿಲ್ಲ. ಅನೇಕ ಫೀಚರ್ ಫೋನುಗಳಲ್ಲಿ ಉತ್ತಮ ಕ್ಯಾಮೆರಾ ಹಾಗೂ ಥ್ರೀಜಿ ಸೌಲಭ್ಯ ಕೂಡ ಇರುತ್ತದೆ.

ಸಾಮಾನ್ಯ ಫೋನು, ಫೀಚರ್ ಫೋನು ಹಾಗೂ ಸ್ಮಾರ್ಟ್ ಫೋನುಗಳ ಪೈಕಿ ನಾವು ಯಾವುದನ್ನೇ ಆರಿಸಿಕೊಂಡರೂ ನಮ್ಮಲ್ಲಿ ಇನ್ನಷ್ಟು ಗೊಂದಲ ಮೂಡಿಸುವ ಪ್ರಶ್ನೆಯೊಂದು ಇನ್ನೂ ಉಳಿದುಕೊಂಡಿರುತ್ತದೆ. ಮೊಬೈಲಿನಲ್ಲಿ ಒಂದು ಸಿಮ್ ಸಾಕೋ, ಅಥವಾ ಎರಡು ಸಿಮ್ ಇರಬೇಕೋ ಎನ್ನುವುದೇ ಆ ಪ್ರಶ್ನೆ.

ನಾವು ಎಷ್ಟು ಸಿಮ್ ಬಳಸುತ್ತೇವೆ ಎನ್ನುವುದು ನಮ್ಮ ವೈಯಕ್ತಿಕ ಆಯ್ಕೆಗಷ್ಟೇ ಬಿಟ್ಟ ವಿಷಯವಾದ್ದರಿಂದ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಿದ್ಧ ಸೂತ್ರವೇನೂ ಇಲ್ಲ. ಆದರೂ ಕೆಲವು ಸಂದರ್ಭಗಳಲ್ಲಿ ಎರಡು ಸಿಮ್ ಇರುವ (ಡ್ಯುಯಲ್ ಸಿಮ್) ಮೊಬೈಲ್ ಬಳಸುವುದು ಉತ್ತಮ ಆಯ್ಕೆಯಾಗಬಲ್ಲದು.

ಕಚೇರಿಯದ್ದೊಂದು, ಸ್ವಂತದ್ದೊಂದು ಎಂದು ಎರಡೆರಡು ಮೊಬೈಲ್ ಬಳಸುವುದು ಅಗತ್ಯವಾದವರಿಗೆ  ಡ್ಯುಯಲ್ ಸಿಮ್ ಫೋನುಗಳು ನಿಜಕ್ಕೂ ಉಪಯುಕ್ತ. ಎರಡು ಫೋನುಗಳನ್ನು ಇಟ್ಟುಕೊಂಡು ಓಡಾಡುವ ಬದಲಿಗೆ ಒಂದೇ ಫೋನಿನಲ್ಲಿ ಎರಡೂ ಸಿಮ್ ಉಪಯೋಗಿಸುವುದು ಸುಲಭವಾಗುತ್ತದೆ. ಬೇರೆಬೇರೆ ಮೊಬೈಲ್ ಸಂಸ್ಥೆಗಳ ಸಂಪರ್ಕ ಪಡೆದುಕೊಂಡು ಒಂದೊಂದನ್ನೂ ಪ್ರತ್ಯೇಕ ಉಪಯೋಗಕ್ಕೆ ಮಾತ್ರ (ಉದಾ: ಕರೆಮಾಡಲು ಒಂದು ಸಿಮ್, ಅಂತರಜಾಲ ಸಂಪರ್ಕಕ್ಕೆ ಇನ್ನೊಂದು ಸಿಮ್) ಬಳಸುವವರೂ ಡ್ಯುಯಲ್ ಸಿಮ್ ಮೊರೆಹೋಗುವುದುಂಟು. ಹೀಗೆ ಮಾಡುವುದರಿಂದ ಮೊಬೈಲ್ ಬಿಲ್‌ನಲ್ಲಿ ಉಳಿತಾಯ ಸಾಧಿಸುವುದಷ್ಟೇ ಅಲ್ಲ, ಒಂದು ಸಂಸ್ಥೆಯ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾಗ ಇನ್ನೊಂದು ಸಂಸ್ಥೆಯ ಸಂಪರ್ಕ ಬಳಸಿಕೊಳ್ಳುವುದು ಕೂಡ ಸಾಧ್ಯವಾಗುತ್ತದೆ.

ಇಷ್ಟೆಲ್ಲ ಪ್ರಶ್ನೆಗಳಾದಮೇಲೆ ಅಂತಿಮವಾಗಿ ನಮ್ಮ ಮೊಬೈಲನ್ನು ಆರಿಸಿಕೊಳ್ಳುವ ಮುನ್ನ ಕೇಳಬೇಕಾದ ಇನ್ನೊಂದು ಪ್ರಶ್ನೆ - "ಮೊಬೈಲಿನಲ್ಲಿ ಕನ್ನಡ ಅಕ್ಷರಗಳು ಮೂಡುತ್ತವೋ ಇಲ್ಲವೋ?"

ಯುನಿಕೋಡ್ ಬಳಕೆ ವ್ಯಾಪಕವಾಗುತ್ತಿದ್ದಂತೆ ಮೊಬೈಲ್ ಫೋನಿನಲ್ಲಿ ಇಂಗ್ಲಿಷ್ ಬಳಸುವಷ್ಟೆ ಸರಾಗವಾಗಿ ಬೇರೆ ಯಾವ ಭಾಷೆಯನ್ನಾದರೂ ಬಳಸುವುದು ತಾಂತ್ರಿಕವಾಗಿ ಸಾಧ್ಯವಾಗಿದೆ. ಕೊರತೆಯೇನಾದರೂ ಇದ್ದರೆ ಅದು ಈ ಸೌಲಭ್ಯಕ್ಕಾಗಿ ಇರುವ ಬೇಡಿಕೆಯದ್ದು ಮಾತ್ರ. ಫೋನ್ ಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಫೋನಿನಲ್ಲಿ ಕನ್ನಡ ಅಕ್ಷರಗಳು ಸರಿಯಾಗಿ ಮೂಡಬೇಕು ಎಂದು ಕೇಳಿದರೆ ಮೊಬೈಲ್ ನಿರ್ಮಾತೃಗಳು ಖಂಡಿತವಾಗಿಯೂ ಆ ಬೇಡಿಕೆಯನ್ನು ಕೇಳಿಸಿಕೊಳ್ಳುತ್ತಾರೆ. ಕನ್ನಡ ಬಾರದ ಫೋನು ನಮಗೆ ಬೇಡ ಎಂದು ಇವತ್ತು ಹೇಳಿನೋಡಿ, ನಾಳಿನ ಎಲ್ಲ ಫೋನುಗಳೂ ಖಂಡಿತವಾಗಿ ಕನ್ನಡ ಕಲಿಯುತ್ತವೆ!

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

3 ಪ್ರತಿಕ್ರಿಯೆಗಳು: