ಡಿಜಿಟಲ್ ಕ್ಯಾಮೆರಾಗಳ ಜನಪ್ರಿಯತೆ ಎಷ್ಟು ಬೆಳೆದಿದೆ ಎಂದರೆ ಇಂದು ಅದು ಎಲ್ಲರಿಗೂ ಬೇಕು. ಟೀವಿ, ಫ್ರಿಜ್ಜು, ವಾಶಿಂಗ್ ಮಶೀನ್ ಇದ್ದಹಾಗೆ ಮನೆಯಲ್ಲಿ ಒಂದು ಡಿಜಿಟಲ್ ಕ್ಯಾಮೆರಾ ಕೂಡ ಇರಬೇಕು ಎಂದು ಯಾರಾದರೂ ಅಂದುಕೊಂಡರೆ ಅದರಲ್ಲಿ ವಿಶೇಷವೇನಿಲ್ಲ.

ಆದರೆ ಈ ಯೋಚನೆಯೊಡನೆ ನಾವು ಡಿಜಿಟಲ್ ಕ್ಯಾಮೆರಾ ಕೊಳ್ಳಲು ಹೊರಟಾಗ ಮಾತ್ರ ಕ್ಲಿಷ್ಟವಾದ ಪ್ರಶ್ನೆಯೊಂದು ನಮ್ಮೆದುರು ಕಾಣಿಸಿಕೊಳ್ಳುತ್ತದೆ: "ಮಾರುಕಟ್ಟೆಯಲ್ಲಿರುವ ನೂರಾರು ಕ್ಯಾಮೆರಾಗಳಲ್ಲಿ ನಮಗೆ ಸೂಕ್ತವಾದುದನ್ನು ಆರಿಸಿಕೊಳ್ಳುವುದು ಹೇಗೆ?"

ಈ ಪ್ರಶ್ನೆಗೆ ಉತ್ತರವನ್ನು ಥಟ್ ಅಂತ ಹೇಳುವುದು ಅಷ್ಟೇನೂ ಸುಲಭದ ಕೆಲಸವಲ್ಲ. ನಮ್ಮ ಅಗತ್ಯಗಳನ್ನು ಅರಿತುಕೊಳ್ಳಲು, ಮಾರುಕಟ್ಟೆಯಲ್ಲಿ ದೊರಕುವ ಬಗೆಬಗೆ ಕ್ಯಾಮೆರಾಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಲು ನಮಗೆ ನಾವೇ ಒಂದಷ್ಟು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕಾದ್ದು ಅನಿವಾರ್ಯ. ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕಂಡುಕೊಂಡೆವೆಂದರೆ ನಮ್ಮ ಸಂಗಾತಿಯಾಗಿ ಸಾಕಷ್ಟು ಸಮಯದವರೆಗೆ ಉಳಿಯಬಲ್ಲ ಕ್ಯಾಮೆರಾ ಕೊಳ್ಳುವುದು ಸುಲಭವಾಗುತ್ತದೆ.

ನಮಗೆ ಛಾಯಾಗ್ರಹಣದಲ್ಲಿ ಎಷ್ಟು ಆಸಕ್ತಿಯಿದೆ, ಹಾಗೂ ನಾವು ಕ್ಯಾಮೆರಾವನ್ನು ಬಳಸುವ ಮುಖ್ಯ ಉದ್ದೇಶ ಏನು ಎಂದು ಕೇಳುವ ಮೂಲಕ ಪ್ರಶ್ನೆಗಳ ಈ ಸರಣಿಯನ್ನು ಪ್ರಾರಂಭಿಸಬಹುದು. ಈ ಪ್ರಶ್ನೆಗಳ ಉತ್ತರದಿಂದ ನಾವು ಯಾವ ರೀತಿಯ ಕ್ಯಾಮೆರಾ ಕೊಳ್ಳಬಹುದು ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳುವುದು ಸುಲಭ.
ತಾಂತ್ರಿಕ ಕೆಲಸವೆಲ್ಲ ಕ್ಯಾಮೆರಾ ಪಾಲಿಗೇ ಇರಲಿ, ಕ್ಲಿಕ್ ಮಾಡಿದಾಗ ಫೋಟೋ ಬಂದರೆ ನಮಗೆ ಅಷ್ಟೇ ಸಾಕು ಎನ್ನುವವರು ನೀವಾದರೆ ಪಾಯಿಂಟ್-ಆಂಡ್-ಶೂಟ್ ಕ್ಯಾಮೆರಾ ಹೇಳಿ ಮಾಡಿಸಿದ ಜೋಡಿ. ಕ್ಯಾಮೆರಾದ ಗಾತ್ರ ಸಣ್ಣದಿರಬೇಕು ಎನ್ನುವವರೂ ಇಂತಹ ಕ್ಯಾಮೆರಾಗಳ ಮೊರೆಹೋಗಬೇಕಾದ್ದು ಅನಿವಾರ್ಯ. ಆದರೆ ಸಣ್ಣಗಾತ್ರದ ಈ ಕ್ಯಾಮೆರಾಗಳ ಕಾರ್ಯಕ್ಷಮತೆ ಎಲ್ಲ ಸಂದರ್ಭಗಳಿಗೂ ಸೂಕ್ತವಾಗಿರುತ್ತದೆ ಎನ್ನುವಂತೇನೂ ಇಲ್ಲ. ಉದಾಹರಣೆಗೆ ಸಣ್ಣ ಗಾತ್ರದ ಸಣ್ಣ ಸಾಮರ್ಥ್ಯದ ಪಾಯಿಂಟ್-ಆಂಡ್-ಶೂಟ್ ಕ್ಯಾಮೆರಾ ದೂರದ ದೃಶ್ಯಗಳನ್ನು ಚೆನ್ನಾಗಿ ಕ್ಲಿಕ್ಕಿಸಲು ಅಸಮರ್ಥವಾಗಿರುತ್ತದೆ.

ಹೀಗಾಗಿ ಪಾಯಿಂಟ್-ಆಂಡ್-ಶೂಟ್ ಕ್ಯಾಮೆರಾಗಳಿಗಿಂತ ಕೊಂಚ ದೊಡ್ಡದಾದ, ಕೊಂಚ ಹೆಚ್ಚು ಸೌಲಭ್ಯಗಳನ್ನು ಒದಗಿಸುವ ಇನ್ನೊಂದು ಬಗೆಯ ಕ್ಯಾಮೆರಾ ಕೂಡ ಮಾರುಕಟ್ಟೆಯಲ್ಲಿದೆ. ಪಾಯಿಂಟ್-ಆಂಡ್-ಶೂಟ್ ಹಾಗೂ ಹೆಚ್ಚು ಸಾಮರ್ಥ್ಯದ ಕ್ಯಾಮೆರಾಗಳ ನಡುವಿನ ಸೇತುವೆಯಂತಿರುವ ಈ ಕ್ಯಾಮೆರಾಗಳನ್ನು 'ಬ್ರಿಜ್' ಕ್ಯಾಮೆರಾಗಳೆಂದು ಕರೆಯುತ್ತಾರೆ. ಇವನ್ನೂ ಪಾಯಿಂಟ್-ಆಂಡ್-ಶೂಟ್‌ನಷ್ಟೇ ಸುಲಭವಾಗಿ ಬಳಸುವುದು ಸಾಧ್ಯ.

ಕ್ಯಾಮೆರಾದ ಗಾತ್ರ ಸ್ವಲ್ಪ ದೊಡ್ಡದಾದರೂ ಪರವಾಗಿಲ್ಲ, ಆದರೆ ತಾಂತ್ರಿಕ ಹೊಂದಾಣಿಕೆಗಳನ್ನು ನಾವೇ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಂಚವಾದರೂ ಇರಬೇಕು ಎನ್ನುವವರು ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾ ಬಳಸಬಹುದು. ಸಣ್ಣ ಕ್ಯಾಮೆರಾಗಳ ಗಾತ್ರದಲ್ಲೇ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದು ಈ ಕ್ಯಾಮೆರಾಗಳ ವೈಶಿಷ್ಟ್ಯ. ಈ ಕ್ಯಾಮೆರಾಗಳಲ್ಲಿ ಬೇರೆಬೇರೆ ಲೆನ್ಸುಗಳನ್ನು ಬಳಸುವುದೂ ಸಾಧ್ಯ.

ಛಾಯಾಗ್ರಹಣದ ಸಂಪೂರ್ಣ ಸ್ವಾತಂತ್ರ್ಯ ನಮ್ಮಲ್ಲೇ ಇರಬೇಕು, ಗಾತ್ರದ ನಿರ್ಬಂಧವೇ ಇಲ್ಲ ಎನ್ನುವವರು ಖಂಡಿತವಾಗಿಯೂ ಡಿಎಸ್‌ಎಲ್‌ಆರ್ ಕ್ಯಾಮೆರಾಗಳನ್ನು ಕೊಳ್ಳಬಹುದು. ಸಾಮಾನ್ಯ ಡಿಜಿಟಲ್ ಕ್ಯಾಮೆರಾಗಳಲ್ಲಿರುವುದಕ್ಕಿಂತ ದೊಡ್ಡ ಸೆನ್ಸರುಗಳನ್ನು ಬಳಸುವ ಈ ಕ್ಯಾಮೆರಾಗಳು ಉತ್ಕೃಷ್ಟ ಗುಣಮಟ್ಟದ ಚಿತ್ರಗಳಿಗೆ ಹೆಸರುವಾಸಿ. ಬೇರೆ ಬೇರೆ ಅಗತ್ಯಗಳಿಗೆ ಬೇರೆಬೇರೆ ಲೆನ್ಸುಗಳನ್ನು ಬಳಸುವ ಸೌಲಭ್ಯವೂ ಈ ಕ್ಯಾಮೆರಾಗಳಲ್ಲಿರುತ್ತದೆ.

ಆದರೆ ಇವುಗಳ ಗಾತ್ರ ಮಾತ್ರ ಬೇರೆಲ್ಲ ಕ್ಯಾಮೆರಾಗಳಿಗಿಂತ ದೊಡ್ಡದಾಗಿರುತ್ತದೆ. ಒಂದೆರಡು ಲೆನ್ಸು ಮತ್ತಷ್ಟು ಪರಿಕರಗಳು ಜೊತೆಗೆ ಸೇರಿದರಂತೂ ಅದನ್ನೆಲ್ಲ ಒಟ್ಟಾಗಿ ಕೊಂಡೊಯ್ಯಲು ಲಗೇಜಿನಲ್ಲಿ ಪ್ರತ್ಯೇಕವಾದುದೊಂದು ಬ್ಯಾಗೇ ಬೇಕು! ಅಷ್ಟೇ ಅಲ್ಲ, ಇವುಗಳನ್ನು ಸಮರ್ಪಕವಾಗಿ ಬಳಸಲು ತಕ್ಕಮಟ್ಟಿನ ಪರಿಶ್ರಮವೂ ಬೇಕು.

ಇದಿಷ್ಟು ಕ್ಯಾಮೆರಾ ಗಾತ್ರ ಹಾಗೂ ಅವುಗಳ ವಿಧಗಳನ್ನು ಕುರಿತ ವಿಷಯವಾಯಿತು. ಇದಾದ ನಂತರ ಪರಿಗಣಿಸಬೇಕಾದ ಅಂಶಗಳು - ಪಿಕ್ಸೆಲ್, ಜೂಮ್ ಇತ್ಯಾದಿ - ಇನ್ನೂ ಬೇಕಾದಷ್ಟಿವೆ.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!
ಮುಂದಿನ ಲೇಖನ
Newer Post
ಹಿಂದಿನ ಲೇಖನ
ಇಲ್ಲಿನ ಲೇಖನಗಳ ಪೈಕಿ ಇದೇ ಮೊದಲಿನದು.

0 ಪ್ರತಿಕ್ರಿಯೆಗಳು:

Post a Comment