ಡಿಜಿಟಲ್ ಕ್ಯಾಮೆರಾ ಕೊಳ್ಳಬೇಕು ಎಂದತಕ್ಷಣ ಕೇಳಸಿಗುವ ಪ್ರಮುಖ ಪ್ರಶ್ನೆ - ಎಷ್ಟು ಮೆಗಾಪಿಕ್ಸೆಲ್ ಇದ್ದರೆ ಒಳ್ಳೆಯದು?

ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಡುವ ಮೊದಲು ಪಿಕ್ಸೆಲ್ ಎಂದರೇನು ಎಂದು ತಿಳಿದುಕೊಳ್ಳುವುದು ಅಗತ್ಯ. ಡಿಜಿಟಲ್ ಕ್ಯಾಮೆರಾ ಬಳಸಿ ಕ್ಲಿಕ್ಕಿಸುತ್ತೇವಲ್ಲ, ಅಂತಹ ಪ್ರತಿಯೊಂದು ಚಿತ್ರದಲ್ಲೂ ಅಪಾರ ಸಂಖ್ಯೆಯ ಪುಟ್ಟಪುಟ್ಟ ಚೌಕಗಳಿರುತ್ತವೆ. ಮನೆಯ ನೆಲದಲ್ಲಿ ಟೈಲ್ಸ್ ಇರುತ್ತವಲ್ಲ, ಹಾಗೆ. ಬೇರೆಬೇರೆ ಬಣ್ಣಗಳ ಇಷ್ಟೆಲ್ಲ ಚೌಕಗಳು ಒಟ್ಟಾಗಿ ನಮ್ಮ ಕಣ್ಣಮುಂದೆ ಚಿತ್ರವನ್ನು ಕಟ್ಟಿಕೊಡುತ್ತವೆ.

ಇಂತಹ ಚೌಕಗಳನ್ನು ಪಿಕ್ಸೆಲ್‌ಗಳೆಂದು ಕರೆಯುತ್ತಾರೆ. ಪಿಕ್ಸೆಲ್ ಎಂಬ ಹೆಸರು 'ಪಿಕ್ಚರ್ ಎಲಿಮೆಂಟ್' ಎನ್ನುವುದರ ಹ್ರಸ್ವರೂಪ. ಚಿತ್ರದಲ್ಲಿ ಇರುವ ಪಿಕ್ಸೆಲ್‌ಗಳ ಸಂಖ್ಯೆ ಜಾಸ್ತಿಯಾದಷ್ಟೂ ಅದರ ಸ್ಪಷ್ಟತೆ ಹೆಚ್ಚು. ಅಂದರೆ, ಚಿತ್ರದಲ್ಲಿ ಹೆಚ್ಚು ಸಂಖ್ಯೆಯ ಪಿಕ್ಸೆಲ್‌ಗಳಿದ್ದಷ್ಟೂ ಅದನ್ನು ಹೆಚ್ಚುಹೆಚ್ಚು ದೊಡ್ಡದಾಗಿ ಮುದ್ರಿಸಿಕೊಳ್ಳಬಹುದು.

ಹೆಚ್ಚು ಎಂದರೆ ಎಷ್ಟು ಎಂದು ಹೇಳಬೇಕಲ್ಲ, ಅದಕ್ಕೆ ಬಳಕೆಯಾಗುವುದೇ ಮೆಗಾಪಿಕ್ಸೆಲ್.
ಒಂದು ಮೆಗಾಪಿಕ್ಸೆಲ್ ಎನ್ನುವುದು ಹತ್ತು ಲಕ್ಷ ಪಿಕ್ಸೆಲ್‌ಗಳಿಗೆ ಸಮಾನ.

ಹಾಗಾದರೆ ಹೆಚ್ಚು ಹೆಚ್ಚು ಮೆಗಾಪಿಕ್ಸೆಲ್ ಇದ್ದಷ್ಟೂ ಕ್ಯಾಮೆರಾ ಒಳ್ಳೆಯದು ಎನ್ನಬಹುದೇ? ಖಂಡಿತಾ ಇಲ್ಲ. ಏಕೆಂದರೆ ನಮ್ಮ ಬಳಕೆಯ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ಮೆಗಾಪಿಕ್ಸೆಲ್ ಇದ್ದರೆ ಬೇಕಾದಷ್ಟು.

ಉದಾಹರಣೆಗೆ ನಾವೀಗ ಒಂದು ಛಾಯಾಚಿತ್ರವನ್ನು ೬ x ೪ ಇಂಚು ಗಾತ್ರದಲ್ಲಿ, ಉತ್ತಮ ಗುಣಮಟ್ಟದಲ್ಲಿ, ಮುದ್ರಿಸಬೇಕಿದೆ ಎಂದುಕೊಳ್ಳೋಣ. ಫೋಟೋ-ಕ್ವಾಲಿಟಿ ಮುದ್ರಣದಲ್ಲಿ ಒಂದು ಇಂಚಿಗೆ ಮುನ್ನೂರು ಪಿಕ್ಸೆಲ್ ಬೇಕಾಗುತ್ತದೆ ಎಂದಿಟ್ಟುಕೊಂಡರೂ ನಮಗೆ ೧೮೦೦ x ೧೨೦೦ ಪಿಕ್ಸೆಲ್ ಇರುವ ಚಿತ್ರ ಸಾಕು. ಅಂದರೆ, ಮೆಗಾಪಿಕ್ಸೆಲ್ ಲೆಕ್ಕದಲ್ಲಿ ನಮ್ಮ ಅಗತ್ಯ ೩ ಮೆಗಾಪಿಕ್ಸೆಲಿಗಿಂತ ಕಡಿಮೆ. ಇನ್ನು ವಿಶ್ವವ್ಯಾಪಿ ಜಾಲದಲ್ಲಿ ಹಂಚಿಕೊಳ್ಳುವುದಕ್ಕಾದರೆ ಇಷ್ಟೂ ಬೇಡ. ಹತ್ತು-ಹನ್ನೆರಡು ಮೆಗಾಪಿಕ್ಸೆಲ್ ಚಿತ್ರಗಳನ್ನು ಫ್ಲೆಕ್ಸ್ ಬ್ಯಾನರುಗಳ ಗಾತ್ರದಲ್ಲೇ ಮುದ್ರಿಸಬಹುದು!

ಹಾಗಾದರೆ ಮೂರಕ್ಕಿಂತ ಹೆಚ್ಚು ಮೆಗಾಪಿಕ್ಸೆಲಿನ ಚಿತ್ರಗಳು ಬೇಡವೇಬೇಡ ಎಂದರೂ ತಪ್ಪಾಗುತ್ತದೆ. ನಾವು ತೆಗೆದ ಚಿತ್ರದ ಯಾವುದೋ ಭಾಗವನ್ನು ಎನ್‌ಲಾರ್ಜ್ ಮಾಡಬೇಕಾದಾಗ, ಅಥವಾ ಚಿತ್ರಗಳನ್ನು ಅತ್ಯುತ್ತಮ ಗುಣಮಟ್ಟದಲ್ಲೋ ಅತಿದೊಡ್ಡ ಗಾತ್ರದಲ್ಲೋ ಮುದ್ರಿಸುವಾಗ ಹೆಚ್ಚು ಮೆಗಾಪಿಕ್ಸೆಲ್ ಖಂಡಿತವಾಗಿಯೂ ಉಪಯುಕ್ತ.

ಹೆಚ್ಚು ಮೆಗಾಪಿಕ್ಸೆಲಿನ ಚಿತ್ರಗಳ ಗಾತ್ರ ಕೂಡ ದೊಡ್ಡದಿರುತ್ತದೆ. ಉದಾಹರಣೆಗೆ ಹದಿನಾಲ್ಕು ಮೆಗಾಪಿಕ್ಸೆಲಿನಲ್ಲಿ ಕ್ಲಿಕ್ಕಿಸಿದ ಚಿತ್ರದ ಗಾತ್ರ ಐದು-ಆರು ಎಂಬಿಯಷ್ಟಿರಬಲ್ಲದು. ಅನಗತ್ಯವಾಗಿ ಹೆಚ್ಚು ಮೆಗಾಪಿಕ್ಸೆಲಿನ ಚಿತ್ರಗಳನ್ನು ಕ್ಲಿಕ್ಕಿಸುವುದರಿಂದ ಮೆಮೊರಿ ಕಾರ್ಡು ಬೇಗ ಭರ್ತಿಯಾಗುತ್ತದೆ, ಅಲ್ಲದೆ ಅಷ್ಟು ದೊಡ್ಡ ಚಿತ್ರಗಳನ್ನು ವಿಶ್ವವ್ಯಾಪಿ ಜಾಲದಲ್ಲಿ ಹಂಚಿಕೊಳ್ಳುವುದೂ ಕಿರಿಕಿರಿಯ ಕೆಲಸ!

ಒಟ್ಟಿನಲ್ಲಿ ಹೇಳುವುದಾದರೆ ಹೆಚ್ಚು ಮೆಗಾಪಿಕ್ಸೆಲ್ ಇದೆ ಎನ್ನುವ ಒಂದೇ ಕಾರಣಕ್ಕೆ ಯಾವ ಕ್ಯಾಮೆರಾವನ್ನೂ ಮೆಚ್ಚಬೇಕಾದ ಅಗತ್ಯವಿಲ್ಲ. ಈಗಾಗಲೇ ಹೇಳಿದಂತೆ ನಮ್ಮ ಬಳಕೆಯ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ಮೆಗಾಪಿಕ್ಸೆಲ್ ಇದ್ದರೆ ಅದೇ ಬೇಕಾದಷ್ಟು!

ಮೆಗಾಪಿಕ್ಸೆಲ್ ಜೊತೆಗೆ ಕ್ಯಾಮೆರಾದ ಸೆನ್ಸರ್ ಹಾಗೂ ಲೆನ್ಸಿನ ಗುಣಮಟ್ಟವೂ ಚಿತ್ರ ಹೇಗೆ ಮೂಡಿಬರುತ್ತದೆ ಎನ್ನುವುದನ್ನು ನಿರ್ಧರಿಸುತ್ತದೆ.

ಕ್ಯಾಮೆರಾದ ಸೆನ್ಸರ್ ದೊಡ್ಡದಿದ್ದಷ್ಟೂ ಅದರಲ್ಲಿ ಸೆರೆಯಾಗುವ ಚಿತ್ರದ ಗುಣಮಟ್ಟ ಚೆನ್ನಾಗಿರುತ್ತದೆ. ಎರಡು ಕ್ಯಾಮೆರಾಗಳಲ್ಲಿ ಸಮಾನ ಮೆಗಾಪಿಕ್ಸೆಲ್ ಸಾಮರ್ಥ್ಯವಿದೆ ಎನ್ನುವುದಾದರೆ ಆ ಪೈಕಿ ಉತ್ತಮವಾದ ಸೆನ್ಸರ್ ಯಾವ ಕ್ಯಾಮೆರಾದಲ್ಲಿದೆಯೋ ಅದು ಹೆಚ್ಚು ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯಬಲ್ಲದು. ಮೊಬೈಲಿನ ೫ ಮೆಗಾಪಿಕ್ಸೆಲ್‌ಗಿಂತ ಪಾಯಿಂಟ್-ಆಂಡ್-ಶೂಟ್ ಕ್ಯಾಮೆರಾದ ೫ ಮೆಗಾಪಿಕ್ಸೆಲ್ ಚಿತ್ರ ಚೆನ್ನಾಗಿ ಕಾಣುವುದು, ಡಿಎಸ್‌ಎಲ್‌ಆರ್‌ನ ೫ ಮೆಗಾಪಿಕ್ಸೆಲ್ ಚಿತ್ರ ಇವೆರಡಕ್ಕಿಂತ ಚೆನ್ನಾಗಿರುವುದು ಇದೇ ಕಾರಣಕ್ಕೆ. ಅಷ್ಟೇ ಅಲ್ಲ, ಉತ್ತಮ ಸೆನ್ಸರ್ ಇರುವ ಕ್ಯಾಮೆರಾ ಕಡಿಮೆ ಬೆಳಕಿನಲ್ಲೂ ಒಳ್ಳೆಯ ಚಿತ್ರಗಳನ್ನು ಸೆರೆಹಿಡಿಯಬಲ್ಲದು.

ಆದರೆ ದೊಡ್ಡ ಸೆನ್ಸರ್ ಇರುವ ಕ್ಯಾಮೆರಾಗಳು - ಉದಾ: ಡಿಎಸ್‌ಎಲ್‌ಆರ್ - ಗಾತ್ರದಲ್ಲಿ ದೊಡ್ಡದಿರುತ್ತವೆ, ಮತ್ತು ಅವುಗಳ ಬೆಲೆಯೂ ಜಾಸ್ತಿ ಎನ್ನುವುದನ್ನು ಮರೆಯುವಂತಿಲ್ಲ. ಹೀಗಾಗಿಯೇ ನಮ್ಮ ಅಗತ್ಯಕ್ಕೆ ತಕ್ಕ ಕ್ಯಾಮೆರಾ ಆರಿಸಿಕೊಳ್ಳುವುದು ನಮ್ಮದೇ ಜವಾಬ್ದಾರಿ!

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

0 ಪ್ರತಿಕ್ರಿಯೆಗಳು:

Post a Comment