ಡಿಜಿಟಲ್ ಕ್ಯಾಮೆರಾ ಕೊಳ್ಳುವಾಗ ಗಮನಿಸಬೇಕಾದ ಅಂಶಗಳಲ್ಲಿ ಜೂಮ್ ಕೂಡ ಪ್ರಮುಖವಾದದ್ದು. ಚಿತ್ರಗಳನ್ನು ಕ್ಲಿಕ್ಕಿಸುವಾಗ ಕ್ಯಾಮೆರಾ ಮುಂದಿರುವ ದೃಶ್ಯದಲ್ಲಿ ನಮಗೆ ಬೇಕಾದ್ದನ್ನಷ್ಟೆ ಆರಿಸಿಕೊಳ್ಳಲು ನೆರವಾಗುವ ಸೌಲಭ್ಯ ಇದು.

ಜೂಮ್‌ನಲ್ಲಿ ಎರಡು ವಿಧ - ಆಪ್ಟಿಕಲ್ ಜೂಮ್ ಹಾಗೂ ಡಿಜಿಟಲ್ ಜೂಮ್. ಆಪ್ಟಿಕಲ್ ಜೂಮ್‌ನಲ್ಲಿ ಕ್ಯಾಮೆರಾ ಲೆನ್ಸಿನ ಫೋಕಲ್ ಲೆಂತ್ ಬದಲಿಸುವ ಮೂಲಕ ಚಿತ್ರದ ವ್ಯಾಪ್ತಿಯನ್ನು ಹಿಗ್ಗಿಸುವುದು ಸಾಧ್ಯ. ಹಾಗಾಗಿ ನಾವು ಕೊಳ್ಳುವ ಕ್ಯಾಮೆರಾದಲ್ಲಿ ಆಪ್ಟಿಕಲ್ ಜೂಮ್ ಹೆಚ್ಚಿದ್ದಷ್ಟೂ ಒಳ್ಳೆಯದು; ಹಾಗಿದ್ದಾಗ ದೂರದ ಚಿತ್ರಗಳನ್ನೂ  ಸುಲಭವಾಗಿ ಕ್ಲಿಕ್ಕಿಸುವುದು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಈ ಬಗೆಯ ಜೂಮ್ ಬಳಸಿ ತೆಗೆದ ಚಿತ್ರಗಳ ಗುಣಮಟ್ಟವೂ ಚೆನ್ನಾಗಿರುತ್ತದೆ.

ಡಿಜಿಟಲ್ ಜೂಮ್‌ನಲ್ಲಿ ಹಾಗಲ್ಲ. ಅಲ್ಲಿ ಮೂಲ ಚಿತ್ರವನ್ನೇ ತೆಗೆದುಕೊಂಡು ನಿಮಗೆ ಬೇಕಾದ ಭಾಗವನ್ನು ಮಾತ್ರ ದೊಡ್ಡ ಗಾತ್ರಕ್ಕೆ ಹಿಗ್ಗಿಸಲಾಗುತ್ತದೆ. ಹೀಗಾಗಿ ಡಿಜಿಟಲ್ ಜೂಮ್ ಬಳಸಿ ತೆಗೆದ ಚಿತ್ರಗಳ ಗುಣಮಟ್ಟ ಅಷ್ಟೇನೂ ಚೆನ್ನಾಗಿರುವುದಿಲ್ಲ. ಅದೂ ಅಲ್ಲದೆ ಹೀಗೆ ಚಿತ್ರಗಳನ್ನು ಹಿಗ್ಗಿಸುವ ಕೆಲಸವನ್ನು ಕಂಪ್ಯೂಟರಿನಲ್ಲೇ ಸುಲಭವಾಗಿ ಮಾಡಬಹುದಾದ್ದರಿಂದ ಕ್ಯಾಮೆರಾಗಳಲ್ಲಿ ಡಿಜಿಟಲ್ ಜೂಮ್‌ಗೆ ಹೆಚ್ಚಿನ ಪ್ರಾಮುಖ್ಯವೇನೂ ಇಲ್ಲ.

ಕ್ಯಾಮೆರಾದಲ್ಲಿ ಲಭ್ಯವಿರುವ ಜೂಮ್ ಸಾಮರ್ಥ್ಯವನ್ನು ಸೂಚಿಸಲು ೧x, ೨x, ೩x ಮುಂತಾದ ಸಂಕೇತಗಳನ್ನು ಬಳಸಲಾಗುತ್ತದೆ. ಇಲ್ಲಿ ೧x ಎನ್ನುವುದು ಮೂಲ ಚಿತ್ರದ ಗಾತ್ರವನ್ನು ಸೂಚಿಸಿದರೆ ೨x, ೩x ಇವೆಲ್ಲ ಚಿತ್ರವನ್ನು ಎಷ್ಟು ಪಟ್ಟು ಹಿಗ್ಗಿಸಲಾಗಿದೆ ಎಂದು ತೋರಿಸುತ್ತವೆ. ೩೦xಗೂ ಹೆಚ್ಚಿನ ಜೂಮ್ ಸಾಮರ್ಥ್ಯವುಳ್ಳ ಕ್ಯಾಮೆರಾಗಳೂ ಮಾರುಕಟ್ಟೆಯಲ್ಲಿವೆ.

ಇದೆಲ್ಲ ಪಾಯಿಂಟ್-ಆಂಡ್-ಶೂಟ್ ಮತ್ತು ಬ್ರಿಜ್ ಕ್ಯಾಮೆರಾಗಳ ಮಾತಾಯಿತು. ಹಾಗೆಂದಮಾತ್ರಕ್ಕೆ ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾ ಹಾಗೂ ಡಿಎಸ್‌ಎಲ್‌ಆರ್‌ಗಳಲ್ಲಿ ಜೂಮ್ ಸೌಲಭ್ಯ ಇರುವುದಿಲ್ಲ ಎಂದೇನೂ ಅಲ್ಲ. ಅಲ್ಲಿ ಜೂಮ್ ಅನ್ನು ಅಳೆಯುವ ವಿಧಾನ ಬೇರೆ, ಹಾಗೂ ಬೇರೆಬೇರೆ ಪ್ರಮಾಣದ ಜೂಮ್ ಪಡೆಯಲು ಬೇರೆಬೇರೆ ಲೆನ್ಸುಗಳನ್ನು ಬಳಸಬೇಕು ಅಷ್ಟೆ.

ಇಂತಹ ಕ್ಯಾಮೆರಾಗಳಲ್ಲಿ ಬಳಕೆಯಾಗುವ ಲೆನ್ಸಿನ ಫೋಕಲ್ ಲೆಂತ್ ಎಷ್ಟು ಎನ್ನುವುದರ ಆಧಾರದ ಮೇಲೆ ಅದರಲ್ಲಿ ಎಷ್ಟು ಜೂಮ್ ಇದೆ ಎನ್ನುವುದು ನಿರ್ಧಾರವಾಗುತ್ತದೆ. ಅಂದರೆ ಸಣ್ಣ ಫೋಕಲ್ ಲೆಂತ್ (ಉದಾ: ೧೮ ಎಂಎಂ) ಇರುವ ಲೆನ್ಸುಗಳನ್ನು ಬಳಸಿ ದೊಡ್ಡ ಪ್ರದೇಶದ ಚಿತ್ರಗಳನ್ನು ಕ್ಲಿಕ್ಕಿಸಬಹುದು. ಹಾಗೆಯೇ ಲೆನ್ಸಿನ ಫೋಕಲ್ ಲೆಂತ್ ಹೆಚ್ಚಿಸಿಕೊಳ್ಳುತ್ತಾ ಹೋದಂತೆ ದೂರದಲ್ಲಿರುವ ಸಣ್ಣ ವಸ್ತುಗಳ ಚಿತ್ರವನ್ನೂ ತೆಗೆಯುವುದು ಸಾಧ್ಯವಾಗುತ್ತದೆ, ಅಂದರೆ ಹೆಚ್ಚಿನ ಜೂಮ್ ಸೌಲಭ್ಯ ಸಿಗುತ್ತದೆ.

ಇಂತಹ ಲೆನ್ಸುಗಳನ್ನು ಬಳಸಿ ಕ್ಲಿಕ್ಕಿಸಿದ ಚಿತ್ರಗಳು ಸಾಮಾನ್ಯ ಕ್ಯಾಮೆರಾದಲ್ಲಿ ತೆಗೆದ ಚಿತ್ರಗಳಿಗಿಂತ ಚೆನ್ನಾಗಿ ಮೂಡಿಬರುತ್ತವೆ, ನಿಜ. ಆದರೆ ಹೆಚ್ಚು ಫೋಕಲ್ ಲೆಂತ್‌ನ ಲೆನ್ಸುಗಳ ಬೆಲೆ ದುಬಾರಿ, ಜೊತೆಗೆ ಗಾತ್ರವೂ ಸಾಕಷ್ಟು ದೊಡ್ಡದಿರುತ್ತದೆ. ಮೊದಲೇ ದೊಡ್ಡದಾದ ಡಿಎಸ್‌ಎಲ್‌ಆರ್‌ಗಳ ಜೊತೆಗೆ ಈ ಲೆನ್ಸುಗಳೂ ಸೇರಿದರೆ ಕ್ಯಾಮೆರಾ ನಿಜ ಅರ್ಥದಲ್ಲಿ ಹೊರೆಯೆನಿಸಲು ಶುರುವಾಗಬಹುದು! ಸಾಮಾನ್ಯ ಕ್ಯಾಮೆರಾಗಳಲ್ಲೂ ಅಷ್ಟೆ, ಆಪ್ಟಿಕಲ್ ಜೂಮ್ ಜಾಸ್ತಿಯಿದ್ದಷ್ಟೂ ಕ್ಯಾಮೆರಾ ಗಾತ್ರ ದೊಡ್ಡದಿರುತ್ತದೆ. ಹಾಗಾಗಿ ಕ್ಯಾಮೆರಾದ ಗಾತ್ರ ಸಣ್ಣದಿರಬೇಕಾದ್ದು ನಿಮ್ಮ ಅಗತ್ಯವಾದರೆ ನೀವು ೩x ಇಲ್ಲವೇ ೪x ಆಸುಪಾಸಿನ ಜೂಮ್‌ಗೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ.

ಜೂಮ್ ಜಾಸ್ತಿಯಿದ್ದಮಾತ್ರಕ್ಕೆ ಹೆಚ್ಚು ಜೂಮ್‌ನಲ್ಲಿ ಅದ್ಭುತ ಚಿತ್ರಗಳೇ ಮೂಡಿಬರಬೇಕು ಎಂದೇನೂ ಇಲ್ಲ. ಜೂಮ್ ಜಾಸ್ತಿಯಾದಾಗ ಚಿತ್ರಗಳು ಶೇಕ್ ಆಗುವ ಸಾಧ್ಯತೆ ಇದ್ದೇ ಇರುತ್ತದೆ. ಹಾಗಾಗಿ ಹೆಚ್ಚು ಜೂಮ್ ಇರುವ ಕ್ಯಾಮೆರಾ ಕೊಳ್ಳುವಾಗ ಹೆಚ್ಚಿನ ಜೂಮ್‌ನಲ್ಲಿ ಚಿತ್ರಗಳು ಹೇಗೆ ಮೂಡಿಬರುತ್ತವೆ ಎನ್ನುವುದನ್ನು ಗಮನಿಸಿಕೊಳ್ಳುವುದು ಒಳ್ಳೆಯದು.

ಚಿತ್ರದ ಮೇಲೆ ಕೈ ಅಲುಗಾಟದ ಪ್ರಭಾವವನ್ನು ಕಡಿಮೆಮಾಡುವ 'ಇಮೇಜ್ ಸ್ಟೆಬಿಲೈಸೇಶನ್' ಸೌಲಭ್ಯವೂ ನಮ್ಮ ಆಯ್ಕೆಯ ಕ್ಯಾಮೆರಾದಲ್ಲಿದ್ದರೆ ಒಳ್ಳೆಯದು. ಈ ಸೌಲಭ್ಯ ಬಳಸಿಕೊಂಡು ಹೆಚ್ಚಿನ ಜೂಮ್‌ನಲ್ಲಿ ಸಾಮಾನ್ಯಕ್ಕಿಂತ ಉತ್ತಮ ಚಿತ್ರಗಳನ್ನು ಕ್ಲಿಕ್ಕಿಸುವುದು ಸಾಧ್ಯ. ಟ್ರೈಪಾಡ್ (ಹಾಗೂ ಕ್ಯಾಮೆರಾದಲ್ಲಿ ಸೌಲಭ್ಯವಿದ್ದರೆ, ರಿಮೋಟ್) ಬಳಸುವುದರಿಂದಲೂ ಚಿತ್ರಗಳು ಶೇಕ್ ಆಗುವುದನ್ನು ತಪ್ಪಿಸಬಹುದು.

ಹಾಗೆಯೇ ಕ್ಯಾಮೆರಾದೊಡನೆ ಬಳಸಲು ಯಾವೆಲ್ಲ ವಸ್ತುಗಳು ಬೇಕಾಗುತ್ತವೆ ಎಂದೂ ಯೋಜಿಸಿಕೊಂಡಿರುವುದು ಒಳ್ಳೆಯದು. ಪೌಚ್ ಅಥವಾ ಬ್ಯಾಗ್, ಮೆಮೊರಿ ಕಾರ್ಡ್, ಬ್ಯಾಟರಿ ಮತ್ತು ಚಾರ್ಜರ್ ಇತ್ಯಾದಿಗಳಲ್ಲಿ ಕ್ಯಾಮೆರಾ ಜೊತೆಗೆ ಏನೆಲ್ಲ ಬರುವುದಿಲ್ಲವೋ ಅವುಗಳ ಖರ್ಚನ್ನೆಲ್ಲ ಕ್ಯಾಮೆರಾ ಕೊಳ್ಳಲು ಮೀಸಲಿಟ್ಟಿರುವ ಒಟ್ಟು ಬಜೆಟ್ಟಿನೊಳಗೇ ಹೊಂದಿಸಿಕೊಳ್ಳುವುದು ಒಳಿತು.

ಅಂತಿಮವಾಗಿ, ನಮಗಿಷ್ಟವಾದ ಕ್ಯಾಮೆರಾವನ್ನು ಕೊಳ್ಳುವ ಮುನ್ನ ಒಮ್ಮೆಯಾದರೂ ಬಳಸಿನೋಡಿದರೆ ಅದು ಕೂಡ ನಮ್ಮ ಆಯ್ಕೆಯನ್ನು ಅಂತಿಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

0 ಪ್ರತಿಕ್ರಿಯೆಗಳು:

Post a Comment