ರೆಫ್ರಿಜರೇಟರ್, ತಂಗಳು ಪೆಟ್ಟಿಗೆ, ಫ್ರಿಜ್ಜು - ಯಾವ ಹೆಸರಿನಿಂದಾದರೂ ಕರೆಯಿರಿ. ಆದರೆ ಈ ಪರಿಕರ (ಅಪ್ಲಯನ್ಸ್) ನಮ್ಮ ದಿನನಿತ್ಯದ ಬದುಕಿನಲ್ಲಿ ವಹಿಸುತ್ತದಲ್ಲ ಪಾತ್ರ, ಅದರ ಮಹತ್ವದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ.

ನಿಜ, ಇಂದಿನ ಯಾಂತ್ರಿಕ ಜೀವನಶೈಲಿಯಲ್ಲಿ ಫ್ರಿಜ್ ಹಾಸುಹೊಕ್ಕಾಗಿ ಬೆರೆತುಬಿಟ್ಟಿರುವ ಪರಿ ನಿಜಕ್ಕೂ ಅನನ್ಯವಾದದ್ದು. ಹಾಗಾಗಿಯೇ ಮನೆಗೆ ಅತ್ಯಗತ್ಯವಾಗಿ ಬೇಕಾಗುವ ಪರಿಕರಗಳ ಸಾಲಿನಲ್ಲಿ ಅದರದ್ದು ಪ್ರಮುಖ ಸ್ಥಾನ. ನಗರಗಳಲ್ಲಂತೂ ಫ್ರಿಜ್ ಇಲ್ಲದ ಮನೆ ಕಾಣಸಿಗುವುದು ಅಪರೂಪವೇ ಇರಬೇಕು.

ಇಷ್ಟೆಲ್ಲ ಮುಖ್ಯವಾದ ಈ ಪರಿಕರವನ್ನು ಖರೀದಿಸಲು ಹೊರಟಾಗ ಮಾರುಕಟ್ಟೆಯಲ್ಲಿ ನಮ್ಮೆದುರು ಬರುವ ಫ್ರಿಜ್ ಮಾದರಿಗಳ ವೈವಿಧ್ಯ ಒಂದುಕ್ಷಣ ನಮ್ಮನ್ನು ದಂಗಾಗಿಸುತ್ತದೆ. ಒಂದು ಬಾಗಿಲಿನದು - ಎರಡು ಬಾಗಿಲಿನದು, ಸಣ್ಣದು - ದೊಡ್ಡದು, ಕಡಿಮೆ ವಿದ್ಯುತ್ ಬಳಸುವಂಥದ್ದು, ಬಾಗಿಲ ಮೇಲೆ ಚೆಂದದ ಚಿತ್ರವಿರುವುದು, ಅರೆಕ್ಷಣದಲ್ಲೇ ಐಸ್ ರೆಡಿಮಾಡುವಂಥದ್ದು - ಫ್ರಿಜ್ಜುಗಳ ಸಾಲಿಗೆ ಕೊನೆಯೇ ಇಲ್ಲ.
ಇಷ್ಟೆಲ್ಲ ಬಗೆಯ ಫ್ರಿಜ್ಜುಗಳ ಪೈಕಿ ನಮಗೆ ಸೂಕ್ತವಾದುದನ್ನು ಆರಿಸಿಕೊಳ್ಳುವ ಮೊದಲು ನಮ್ಮ ಅಗತ್ಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡಿರಬೇಕಾದ್ದು ಅತ್ಯಗತ್ಯ. ಉದಾಹರಣೆಗೆ, ಫ್ರಿಜ್ಜಿನ ಗಾತ್ರ. ಮನೆಯಲ್ಲಿ ಎಷ್ಟು ಜನರಿದ್ದೇವೆ ಎನ್ನುವುದರ ಆಧಾರದ ಮೇಲೆ ನಮಗೆಷ್ಟು ದೊಡ್ಡ ಫ್ರಿಜ್ ಬೇಕು ಎನ್ನುವುದನ್ನು ತೀರ್ಮಾನಿಸಿಕೊಳ್ಳಬಹುದು. ಒಬ್ಬರೋ ಇಬ್ಬರೋ ಇರುವ ಮನೆಗೆ ಇನ್ನೂರು ಲೀಟರಿಗಿಂತ ಕಡಿಮೆ ಸಾಮರ್ಥ್ಯದ ಫ್ರಿಜ್ ಸಾಕಾಗಬಹುದು; ಆದರೆ ಮೂರು-ನಾಲ್ಕು ಜನರಿರುವ ಮನೆಗೆ ಇನ್ನೂರರಿಂದ ಮುನ್ನೂರು ಲೀಟರ್ ಸಾಮರ್ಥ್ಯ ಬೇಕಾಗುತ್ತದೆ. ನಾವು ಫ್ರಿಜ್‌ನಲ್ಲಿ ಏನೇನು ಇಡುತ್ತೇವೆ ಎನ್ನುವುದರ ಮೇಲೆ ಇದನ್ನು ಹೆಚ್ಚು-ಕಡಿಮೆ ಕೂಡ ಮಾಡಿಕೊಳ್ಳಬಹುದು.

ದೊಡ್ಡ ಫ್ರಿಜ್ ಕೊಳ್ಳುವುದಾದರೆ ಎರಡು ಬಾಗಿಲಿನದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವೂ ನಮಗೆ ಸಿಗುತ್ತದೆ. ಒಂದರ ಮೇಲೊಂದು ಬಾಗಿಲಿರುವ ಫ್ರಿಜ್ (ಫ್ರೀಜರಿಗೊಂದು, ಮಿಕ್ಕ ಭಾಗಕ್ಕೊಂದು ಬಾಗಿಲು) ಸಾಮಾನ್ಯವಾಗಿ ಕಾಣಸಿಗುತ್ತದಲ್ಲ, ಅದಕ್ಕಿಂತ ಹೆಚ್ಚು ಹಣ ವೆಚ್ಚಮಾಡಲು ಸಿದ್ಧರಿದ್ದರೆ ಅಕ್ಕಪಕ್ಕದಲ್ಲಿ ಬಾಗಿಲಿರುವ, ನೋಡಲು ಅಲ್ಮೇರಾದಂತೆ ಕಾಣುವ ಫ್ರಿಜ್ಜನ್ನೂ ಕೊಳ್ಳಬಹುದು. ಅದು ಬೇಡವೆಂದರೆ ಫ್ರೀಜರ್ ಕೆಳಭಾಗದಲ್ಲಿರುವಂತಹ ಮಾದರಿಗಳೂ ಸಿಗುತ್ತವೆ. ಫ್ರೀಜರನ್ನು ನಾವು ಹೆಚ್ಚಾಗಿ ಬಳಸುವುದಿಲ್ಲವಲ್ಲ, ಹಾಗಾಗಿ ಅದನ್ನು ಕೆಳಭಾಗಕ್ಕೆ ಕಳುಹಿಸಿದರೆ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಪದೇಪದೇ ಬಗ್ಗುವ ಅಗತ್ಯ ಇರುವುದಿಲ್ಲ ಎನ್ನುವುದು ಇಂತಹ ಫ್ರಿಜ್ ತಯಾರಿಸಿರುವವರ ಆಲೋಚನೆ.

ಫ್ರಿಜ್ ಸಾಮರ್ಥ್ಯದಷ್ಟೇ ಪ್ರಮುಖವಾದ ಇನ್ನೊಂದು ಅಂಶವೆಂದರೆ ಮನೆಯಲ್ಲಿ ಅದನ್ನು ಇಡಲು ಲಭ್ಯವಿರುವ ಸ್ಥಳಾವಕಾಶ. ನಮ್ಮ ಆಯ್ಕೆಯ ರೆಫ್ರಿಜರೇಟರ್ ಇರುವಷ್ಟು ಜಾಗದಲ್ಲಿ ಅಡಕವಾಗಿ ಕುಳಿತು ಸರಾಗವಾಗಿ ಬಾಗಿಲು ತೆರೆಯಲೂ ಅನುವುಮಾಡಿಕೊಡಬೇಕಾದ್ದು ಅತ್ಯಗತ್ಯ.

ಅಷ್ಟೇ ಅಲ್ಲ, ಫ್ರಿಜ್ಜಿನಲ್ಲಿ ಶೆಲ್ಫುಗಳೆಷ್ಟಿವೆ, ಅವು ಎಷ್ಟು ಅನುಕೂಲಕರವಾಗಿವೆ ಎನ್ನುವುದರಿಂದ ಪ್ರಾರಂಭಿಸಿ ಫ್ರಿಜ್ ಕೆಲಸಮಾಡುವಾಗ ಎಷ್ಟು ಶಬ್ದಮಾಡುತ್ತದೆ ಎನ್ನುವುದರವರೆಗೆ ಅನೇಕ ಅಂಶಗಳನ್ನೂ ಗಮನಿಸಿಕೊಳ್ಳುವುದು ಒಳಿತು.

ಇನ್ನೊಂದು ಪ್ರಮುಖ ಅಂಶವೆಂದರೆ ಫ್ರಿಜ್ ತಂಪಾಗುವ ರೀತಿ (ಕೂಲಿಂಗ್ ಟೈಪ್). ಒಂದೇ ಬಾಗಿಲಿನ ಬಹುತೇಕ ರೆಫ್ರಿಜರೇಟರುಗಳು 'ಡೈರೆಕ್ಟ್ ಕೂಲ್' ತಂತ್ರಜ್ಞಾನ ಬಳಸುತ್ತವೆ. ಈ ಮಾದರಿಯ ಫ್ರಿಜ್ಜಿನ ಫ್ರೀಜರ್‌ನಲ್ಲಿ ಮಂಜುಗಡ್ಡೆ ಕಟ್ಟಿಕೊಳ್ಳುವುದು ಸಾಮಾನ್ಯ ಸಂಗತಿ; ಹಾಗಾಗಿ ನಿಗದಿತ ಅವಧಿಗೊಮ್ಮೆ ಅದನ್ನು ನಾವೇ 'ಡೀಫ್ರಾಸ್ಟ್' ಮಾಡಬೇಕಾದ್ದು ಕಡ್ಡಾಯ. ಕೆಲವೊಮ್ಮೆ ಇದು ಕಿರಿಕಿರಿಯ ಸಂಗತಿ ಎನ್ನಿಸಬಹುದು.

ಕೊಂಚ ದೊಡ್ಡ ರೆಫ್ರಿಜರೇಟರುಗಳು 'ಫ್ರಾಸ್ಟ್-ಫ್ರೀ' ತಂತ್ರಜ್ಞಾನ ಬಳಸುತ್ತವೆ. ಹಾಗಾಗಿ ಫ್ರೀಜರಿನಲ್ಲಿ ಮಂಜುಗಡ್ಡೆ ಕಟ್ಟಿಕೊಳ್ಳುವುದೂ ಇಲ್ಲ, ನಾವೇ ಡೀಫ್ರಾಸ್ಟ್ ಮಾಡಬೇಕಾದ ಕಿರಿಕಿರಿಯೂ ಇರುವುದಿಲ್ಲ. ಈ ಮಾದರಿಯ ರೆಫ್ರಿಜರೇಟರುಗಳು ಡೈರೆಕ್ಟ್ ಕೂಲ್ ಮಾದರಿಯವುಗಳಿಗಿಂತ ದುಬಾರಿಯಷ್ಟೇ ಅಲ್ಲ, ಹೆಚ್ಚಿನ ವಿದ್ಯುತ್ತನ್ನೂ ಬಳಸುತ್ತವೆ.

ವಿದ್ಯುತ್ ಬಳಕೆಯ ವಿಷಯಕ್ಕೆ ಬಂದರೆ ಆದಷ್ಟೂ ಕಡಿಮೆ ವಿದ್ಯುತ್ ಬಳಸುವ ರೆಫ್ರಿಜರೇಟರ್ ಆರಿಸಿಕೊಳ್ಳುವುದು ನಮ್ಮ ಜೇಬಿನ ದೃಷ್ಟಿಯಿಂದಷ್ಟೇ ಅಲ್ಲ, ಪರಿಸರದ ದೃಷ್ಟಿಯಿಂದಲೂ ಒಳ್ಳೆಯದು. ಫ್ರಿಜ್ ಮಾತ್ರವೇ ಅಲ್ಲ, ಯಾವುದೇ ಪರಿಕರ ಎಷ್ಟು ವಿದ್ಯುತ್ ಬಳಸುತ್ತದೆ ಎನ್ನುವುದನ್ನು ಭಾರತ ಸರಕಾರದ ಬ್ಯೂರೋ ಆಫ್ ಎನರ್ಜಿ ಎಫಿಶಿಯೆನ್ಸಿ (ಬಿಇಇ) ಯವರು ನೀಡುವ ರೇಟಿಂಗ್ ನಮಗೆ ತಿಳಿಸಬಲ್ಲದು. ಐದು ನಕ್ಷತ್ರಗಳ (ಫೈವ್ ಸ್ಟಾರ್) ರೇಟಿಂಗ್ ಇರುವ ಪರಿಕರವನ್ನು ಆರಿಸಿಕೊಳ್ಳುವ ಮೂಲಕ ನಾವು ವಿದ್ಯುತ್ ಉಳಿಸಲು ನೆರವಾಗಬಹುದು.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

0 ಪ್ರತಿಕ್ರಿಯೆಗಳು:

Post a Comment