ಚಳಿಗಾಲ ಬಂತೆಂದರೆ ಮನೆಯಲ್ಲಿ ಬಿಸಿನೀರಿಗೆ ಡಿಮ್ಯಾಂಡು ಜಾಸ್ತಿಯಾಗುತ್ತದೆ. ಸಾಮಾನ್ಯವಾಗಿ ತಣ್ಣೀರು ಸ್ನಾನ ಮಾಡುವವರಿಗೂ ಆಗ ಬಿಸಿನೀರೇ ಬೇಕು. ಹಾಗಾಗಿಯೇ ಬಿಸಿನೀರಿನ ಬೇಡಿಕೆಯನ್ನು ಸಮರ್ಥವಾಗಿ ಪೂರೈಸುವ ವಾಟರ್ ಹೀಟರ್ ನಮ್ಮೆಲ್ಲರ ಮನೆಗಳಲ್ಲೂ ಅತ್ಯಗತ್ಯವಾಗಿ ಬೇಕಾದ ಪರಿಕರ ಎನ್ನಿಸಿಕೊಂಡುಬಿಟ್ಟಿದೆ. ಆದರೆ ನಮ್ಮ ಅಗತ್ಯಗಳಿಗೆ ತಕ್ಕುದಾದ ವಾಟರ್ ಹೀಟರ್ ಆಯ್ದುಕೊಳ್ಳುವುದು ಹೇಗೆ?

ನೀರು ಕಾಯಿಸುವ ಪರಿಕರಗಳನ್ನು ಹುಡುಕಲು ಹೊರಟಾಗ ನಮ್ಮ ಮುಂದೆ ಅನೇಕ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಒಂದುಬಾರಿಗೆ ಒಂದೇ ಲೀಟರ್ ನೀರು ಬಿಸಿಮಾಡಿಕೊಡುವ ಪುಟಾಣಿ ಗೀಸರಿನಿಂದ ಪ್ರಾರಂಭಿಸಿ ನೂರಿನ್ನೂರು ಲೀಟರ್ ನೀರನ್ನು ಬಿಸಿಬಿಸಿಯಾಗಿ ರೆಡಿಮಾಡಿಟ್ಟಿರುವ ಸೋಲಾರ್ ವಾಟರ್ ಹೀಟರ್‌ವರೆಗೆ, ಕ್ಷಣಾರ್ಧದಲ್ಲಿ ನೀರು ಬಿಸಿಮಾಡುವ ಗ್ಯಾಸ್ ಗೀಸರಿನಿಂದ ಪ್ರಾರಂಭಿಸಿ ಸ್ವಿಚ್ ಹಾಕಿದಮೇಲೆ ಐದು ನಿಮಿಷ ನಮ್ಮನ್ನೇ ಕಾಯಿಸುವ ಇಲೆಕ್ಟ್ರಿಕ್ ಗೀಸರ್‌ವರೆಗೆ ವಾಟರ್ ಹೀಟರುಗಳಲ್ಲಿ ಹತ್ತಾರು ವಿಧ. ಒಂದು ಕಾಲದಲ್ಲಿ ಅದೆಷ್ಟೋ ಬಚ್ಚಲುಮನೆಗಳಲ್ಲಿ ತಮ್ಮ ಆಧಿಪತ್ಯ ಸ್ಥಾಪಿಸಿದ್ದ, ಇದೀಗ ನಿಧಾನಕ್ಕೆ ತೆರೆಮರೆಗೆ ಸರಿಯುತ್ತಿರುವ ಹೀಟಿಂಗ್ ಕಾಯಿಲ್‌ಗಳು, ಬಾಯ್ಲರುಗಳನ್ನೂ ಮರೆಯುವಂತಿಲ್ಲ!

ನಗರಗಳಲ್ಲಿ ಹೊಸದಾಗಿ ಮನೆಕಟ್ಟುತ್ತಿರುವವರಿಗಾದರೆ ಆಯ್ಕೆ ಬಹಳ ಸುಲಭ - ಹೊಸ ಕಟ್ಟಡಗಳಲ್ಲಿ ಸೋಲಾರ್ ವಾಟರ್ ಹೀಟರ್ ಇರಬೇಕೆನ್ನುವುದು ಬಹಳಷ್ಟು ಕಡೆ ಈಗ ಕಾನೂನೇ ಆಗಿಬಿಟ್ಟಿದೆ. ಹಾಗೆಂದಮಾತ್ರಕ್ಕೆ ಹಳೆಯ ಮನೆಗಳಲ್ಲಿ ಸೋಲಾರ್ ವಾಟರ್ ಹೀಟರ್ ಇರಬಾರದು ಎಂದೇನೂ ಇಲ್ಲ; ನಿಮ್ಮ ಮನೆ ತಕ್ಕಮಟ್ಟಿಗೆ ಬಿಸಿಲುಬೀಳುವ ಪ್ರದೇಶದಲ್ಲಿದ್ದು, ಅಗತ್ಯ ಸ್ಥಳಾವಕಾಶವಿದ್ದರೆ ಸೋಲಾರ್ ವಾಟರ್ ಹೀಟರ್ ನಿಸ್ಸಂಶಯವಾಗಿ ನಿಮ್ಮ ಮೊದಲ ಆಯ್ಕೆಯಾಗಬಲ್ಲದು. ಮನೆಯಲ್ಲಿರುವ ಜನರ ಅಗತ್ಯಗಳಿಗೆ ಎಷ್ಟು ಸಾಮರ್ಥ್ಯದ ವಾಟರ್ ಹೀಟರ್ ಬೇಕೆಂದು ತೀರ್ಮಾನಿಸಿಕೊಂಡರೆ ಆಯಿತು ಅಷ್ಟೆ. ನವೀಕರಿಸಬಲ್ಲ ಇಂಧನ ಬಳಸುವ ಸಮಾಧಾನವೊಂದೇ ಅಲ್ಲ, ಜೊತೆಗೆ ವಿದ್ಯುತ್ ಬಿಲ್ಲಿನಲ್ಲೂ ರಿಯಾಯಿತಿ ಸಿಗುತ್ತದೆ!

ಸ್ಥಳಾವಕಾಶದ ಕೊರತೆಯೋ ಚಳಿಗಾಲದಲ್ಲಿ ಸೂರ್ಯ ಕಾಣದ ಸಮಸ್ಯೆಯೋ ಬಜೆಟ್ ಕೊರತೆಯೋ - ಯಾವುದೋ ಕಾರಣದಿಂದ ಸೋಲಾರ್ ವಾಟರ್ ಹೀಟರ್ ಅಳವಡಿಸಲು ಸಾಧ್ಯವಿಲ್ಲದವರ ಮುಂದೆಯೂ ಸಾಕಷ್ಟು ಆಯ್ಕೆಗಳಿರುತ್ತವೆ.

ಇಂತಹ ಆಯ್ಕೆಗಳ ಪೈಕಿ ಪ್ರಮುಖವಾದದ್ದು ವಿದ್ಯುತ್ತಿನ ಸಹಾಯದಿಂದ ಕೆಲಸಮಾಡುವ ವಾಟರ್ ಹೀಟರುಗಳು. ಸಾಮಾನ್ಯ ಭಾಷೆಯಲ್ಲಿ ಗೀಸರ್ ಎಂದು ಕರೆಸಿಕೊಳ್ಳುವ ಇವುಗಳಲ್ಲೂ ಬೇಕಾದಷ್ಟು ವಿಧಗಳಿವೆ.

ಅದರಲ್ಲೆಂತಹ ವಿಧ, ಗಾತ್ರ-ಬಣ್ಣ ಎರಡೇ ತಾನೆ ಎನ್ನುವಂತಿಲ್ಲ. ಗಡಸು ನೀರಿನ ಸಮಸ್ಯೆಯಿರುವ ಕಡೆಗಳಲ್ಲಿ ಗೀಸರ್‌ನ ಟ್ಯಾಂಕ್ ಹಾಗೂ ಹೀಟಿಂಗ್ ಎಲಿಮೆಂಟ್ ಉತ್ತಮ ಗುಣಮಟ್ಟದ್ದಾಗಿರಬೇಕಾದ್ದು ಅನಿವಾರ್ಯ. ನೀರು ಪೂರೈಸಲು ಪ್ರೆಶರ್ ಪಂಪ್ ಬಳಸುವ ಬಹುಮಹಡಿ ಕಟ್ಟಡಗಳಲ್ಲಿರುವವರು ಹೆಚ್ಚು ಒತ್ತಡ (ಹೈ ಪ್ರೆಶರ್) ತಡೆದುಕೊಳ್ಳುವಂತಹ ಟ್ಯಾಂಕ್ ಇರುವ ಗೀಸರ್ ಅನ್ನೇ ಆಯ್ದುಕೊಳ್ಳಬೇಕು. ಇನ್ನು ವಿದ್ಯುತ್ ಬಳಕೆಯ ದೃಷ್ಟಿಯಿಂದ ನೋಡಿದಾಗ ಹೆಚ್ಚಿನ ಬಿಇಇ ರೇಟಿಂಗ್ ಇರುವ ವಾಟರ್ ಹೀಟರ್ ಕೊಳ್ಳುವುದು ಜಾಣತನ. ಐದು ನಕ್ಷತ್ರಗಳ (ಫೈವ್ ಸ್ಟಾರ್) ರೇಟಿಂಗ್ ಇರುವ ಪರಿಕರ ವಿದ್ಯುತ್ ಬಳಕೆಯಲ್ಲಿ ಅತ್ಯಂತ ಸಕ್ಷಮವಾಗಿರುತ್ತದೆ.

ಗೀಸರ್ ಯಾವ ಗಾತ್ರದ್ದಾಗಿರಬೇಕು ಎನ್ನುವುದನ್ನು ಆಯ್ದುಕೊಳ್ಳುವುದೂ ಮುಖ್ಯ. ನಾವು ಕೊಳ್ಳುವ ಗೀಸರ್ ಸಾಮರ್ಥ್ಯ ಮನೆಯಲ್ಲಿರುವ ಜನರ ಸಂಖ್ಯೆ ಹಾಗೂ ಬಿಸಿನೀರಿನ ಅಗತ್ಯಕ್ಕೆ ಹೊಂದಿಕೊಳ್ಳುವಂತಿರಬೇಕು. ಲಭ್ಯವಿರುವ ಜಾಗವನ್ನು ಗಮನಿಸಿಕೊಂಡು ಅಡ್ಡಡ್ಡಲಾದ (ಹಾರಿಜಾಂಟಲ್) ಅಥವಾ ಲಂಬವಾದ (ವರ್ಟಿಕಲ್) ವಿನ್ಯಾಸದ ಗೀಸರ್ ಅನ್ನು ಆಯ್ದುಕೊಳ್ಳಬಹುದು.

ಇದೆಲ್ಲ ನೀರು ಸಂಗ್ರಹಿಸಿಟ್ಟುಕೊಂಡು ಬಿಸಿಮಾಡುವ (ಟ್ಯಾಂಕ್ ಟೈಪ್) ಗೀಸರಿನ ವಿಷಯವಾಯಿತು. ಟ್ಯಾಂಕಿನ ಗೊಡವೆಯಿಲ್ಲದೆ ನೀರನ್ನು ನೇರವಾಗಿ ಬಿಸಿಮಾಡುವ ಇನ್ನೊಂದು ವಿಧ ಟ್ಯಾಂಕ್‌ಲೆಸ್ ಅಥವಾ ಇನ್ಸ್‌ಟಂಟ್ ವಾಟರ್ ಹೀಟರುಗಳದ್ದು. ಸಣ್ಣಗಾತ್ರದ ಈ ವಾಟರ್ ಹೀಟರುಗಳು ತಕ್ಷಣವೇ ನೀರನ್ನು ಬಿಸಿಮಾಡಿಕೊಡುತ್ತವೆ. ಒಂದೇ ಬಾರಿಗೆ ಎರಡು-ಮೂರು ಲೀಟರಿಗಿಂತ ಹೆಚ್ಚಿನ ಬಿಸಿನೀರು ಬೇಕಾಗದ ಕಡೆಗಳಲ್ಲಿ (ಉದಾ: ಅಡುಗೆಮನೆ) ಈ ರೀತಿಯ ಗೀಸರ್ ಹೆಚ್ಚು ಉಪಯುಕ್ತ. ಟ್ಯಾಂಕ್ ಟೈಪ್ ಗೀಸರುಗಳಿಗೆ ಹೋಲಿಸಿದರೆ ಈ ಬಗೆಯ ವಾಟರ್ ಹೀಟರ್‌ಗಳು ಕೊಂಚ ದುಬಾರಿ ಎಂದೇ ಹೇಳಬೇಕು.

ಈಚಿನ ವರ್ಷಗಳಲ್ಲಿ ಜನಪ್ರಿಯತೆ ಗಳಿಸಿಕೊಂಡಿರುವ ಗ್ಯಾಸ್ ಗೀಸರುಗಳೂ ನೀರನ್ನು ತಕ್ಷಣ ಬಿಸಿಮಾಡಿಕೊಡುತ್ತವೆ. ಆದರೆ ಇಲ್ಲಿ ಗ್ಯಾಸ್ ಉರಿದು ನೀರು ಬಿಸಿಯಾಗುವಾಗ ಸುತ್ತಲಿನ ಆಮ್ಲಜನಕದ ಪ್ರಮಾಣ ಕಡಿಮೆಯಾಗುವುದು, ಕಾರ್ಬನ್ ಮಾನಾಕ್ಸೈಡ್‌ನಂತಹ ವಿಷಕಾರಿ ಅನಿಲಗಳು ಉತ್ಪತ್ತಿಯಾಗುವುದು ಸಹಜ. ಹಾಗಾಗಿ ಸೂಕ್ತ ಗಾಳಿ ಬೆಳಕಿನ ವ್ಯವಸ್ಥೆಯಿಲ್ಲದ ಕಡೆ ಗ್ಯಾಸ್ ಗೀಸರುಗಳನ್ನು ಅಳವಡಿಸುವುದು, ಬಳಸುವುದು ಅಪಾಯಕಾರಿಯಾಗಬಲ್ಲದು. ಒಂದುವೇಳೆ ಗ್ಯಾಸ್ ಗೀಸರ್ ಬಳಸುವುದೇ ಆದರೆ ಅದನ್ನು ಸ್ನಾನದ ಮನೆಯಿಂದ ಹೊರಗೆ ಅಳವಡಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

0 ಪ್ರತಿಕ್ರಿಯೆಗಳು:

Post a Comment