ಒಂದು ಕಾಲವಿತ್ತು, ಆಗ ಕಂಪ್ಯೂಟರ್ ಎಂದರೆ ಅದು ಒಂದು ಕೋಣೆಯ ತುಂಬ ತುಂಬಿಕೊಂಡಿರುತ್ತಿತ್ತಂತೆ. ನಂತರದ ವರ್ಷಗಳಲ್ಲಿ, ನಮಗೆ ಕಂಪ್ಯೂಟರಿನ ಪರಿಚಯವಾಗುವಷ್ಟರಲ್ಲಿ ಅವು ಕೋಣೆಯ ಮೂಲೆಯ ಮೇಜಿನ ಮೇಲೆ ಕುಳಿತಿರುತ್ತಿದ್ದವು. ಅದೂ ದೊಡ್ಡದು ಎನ್ನಿಸಲು ಶುರುವಾದಾಗ ಸೃಷ್ಟಿಯಾದದ್ದೇ ಲ್ಯಾಪ್‌ಟಾಪ್.

ತೊಡೆಯ ಮೇಲಿಟ್ಟುಕೊಳ್ಳುವಷ್ಟು ಸಣ್ಣಗಾತ್ರದಲ್ಲಿ ದೊಡ್ಡ ಕಂಪ್ಯೂಟರಿನ ವೈಶಿಷ್ಟ್ಯಗಳನ್ನೆಲ್ಲ ನೀಡುವ ಲ್ಯಾಪ್‌ಟಾಪನ್ನು ಒಂದುಕಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯುವುದೂ ಸುಲಭ. ಹಾಗಾಗಿಯೇ ಕಚೇರಿ ಉದ್ಯೋಗಿಗಳಿಂದ ಕಾಲೇಜು ವಿದ್ಯಾರ್ಥಿಗಳವರೆಗೆ ಎಲ್ಲರಿಗೂ ಲ್ಯಾಪ್‌ಟಾಪ್ ಅಚ್ಚುಮೆಚ್ಚು.

ಇಷ್ಟೆಲ್ಲ ಜನಪ್ರಿಯತೆ ಇರುವುದರಿಂದ ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಲ್ಯಾಪ್‌ಟಾಪ್ ಕಂಪ್ಯೂಟರುಗಳು ನಮ್ಮ ಮಡಿಲು ಸೇರಲು ಸ್ಪರ್ಧೆಯಲ್ಲಿರುತ್ತವೆ. ಒಂದು ಮಾದರಿ ಹಳತಾಗುವಷ್ಟರಲ್ಲಿ ಹೊಸ ನಮೂನೆಯ ಮೂರು ಮಾದರಿಗಳು ಹಾಜರ್! ಇಷ್ಟೆಲ್ಲ ಬಗೆಯ ಲ್ಯಾಪ್‌ಟಾಪ್‌ಗಳಲ್ಲಿ ನಮಗೆ ಬೇಕಾದುದನ್ನು ಆರಿಸಿಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ಗಮನಿಸಬಹುದಾದ ಕೆಲ ಅಂಶಗಳು ಇಲ್ಲಿವೆ.

ಸಾವಿರಗಳಲ್ಲಿ ಶುರುವಾಗುವ ಲ್ಯಾಪ್‌ಟಾಪ್ ಬೆಲೆ ಬಹಳ ಆರಾಮವಾಗಿ ಲಕ್ಷ ರೂಪಾಯಿ ಗಡಿಯನ್ನೂ ದಾಟಬಲ್ಲದು. ಹಾಗಾಗಿ ಖರೀದಿಗೆ ಹೊರಡುವ ಮುನ್ನ ನಮ್ಮ ಬಜೆಟ್ ಎಷ್ಟು ಎಂದು ತೀರ್ಮಾನಿಸಿಕೊಳ್ಳಬೇಕಾದ್ದು ಅನಿವಾರ್ಯ.

ಆದರೆ ಖರೀದಿಗೆ ನಮ್ಮ ಬಜೆಟ್ ಒಂದೇ ಮಾನದಂಡವಾಗಲೂಬಾರದು.
ಲ್ಯಾಪ್‌ಟಾಪ್ ನಮಗೆ ಯಾವ ಉದ್ದೇಶಕ್ಕಾಗಿ ಬೇಕು ಎನ್ನುವುದು ನಾವು ಅದಕ್ಕಾಗಿ ಎಷ್ಟು ಹಣ ತೆರಲು ಸಿದ್ಧರಿದ್ದೇವೆ ಎನ್ನುವಷ್ಟೇ ಮುಖ್ಯವಾದ ಅಂಶ. ಉದಾಹರಣೆಗೆ ಹೇಳುವುದಾದರೆ ಗ್ರಾಫಿಕ್ ಡಿಸೈನ್ ಮಾಡುವವರಿಗೆ ಬೇಕಾಗುವ ಲ್ಯಾಪ್‌ಟಾಪ್‌ಗೂ ಸುಮ್ಮನೆ ಬ್ರೌಸ್ ಮಾಡಲು ಬೇಕಾಗುವ ಲ್ಯಾಪ್‌ಟಾಪ್‌ಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಹಾಗಾಗಿ ಲ್ಯಾಪ್‌ಟಾಪ್ ಬಳಸಿ ನಾವು ಏನು ಕೆಲಸಮಾಡುತ್ತೇವೆ ಎನ್ನುವುದರ ಆಧಾರದ ಮೇಲೆ ಅದರಲ್ಲಿ ಯಾವ ಪ್ರಾಸೆಸರ್ ಇರಬೇಕು, ರ್‍ಯಾಮ್ ಎಷ್ಟಿರಬೇಕು, ಯಾವ ಗ್ರಾಫಿಕ್ಸ್ ಕಾರ್ಡ್ ಬೇಕು, ಬೇರೆ ಏನೆಲ್ಲ ಸೌಲಭ್ಯಗಳಿರಬೇಕು ಎನ್ನುವುದನ್ನು ತೀರ್ಮಾನಿಸಿಕೊಳ್ಳಬೇಕಾಗುತ್ತದೆ.

ಅದನ್ನೆಲ್ಲ ನಾವೇ ತೀರ್ಮಾನಿಸುವುದು ಕಷ್ಟ ಎನ್ನುವುದಾದರೂ ಯೋಚನೆಯಿಲ್ಲ. ನಾವು ಯಾವ ಬಗೆಯ ತಂತ್ರಾಂಶಗಳನ್ನು ಬಳಸುತ್ತೇವೆ ಎನ್ನುವುದಷ್ಟು ಗೊತ್ತಾದರೆ ಲ್ಯಾಪ್‌ಟಾಪಿನ ರೂಪುರೇಖೆ (ಕನ್ಫಿಗರೇಶನ್) ಏನಿರಬೇಕು ಎಂದು ನಿರ್ಧರಿಸಲು ತಜ್ಞರ ನೆರವು ಪಡೆದುಕೊಳ್ಳುವುದೂ ಸಾಧ್ಯ. ತೀರಾ ಪ್ರಾಥಮಿಕ ಅಗತ್ಯಗಳಿಗೆ ಮಾತ್ರ ಲ್ಯಾಪ್‌ಟಾಪ್ ಬಳಸುವವರು ಹಣವಿದೆ ಎನ್ನುವ ಒಂದೇ ಕಾರಣಕ್ಕೆ ಒಂದೂವರೆಲಕ್ಷದ ಗೇಮಿಂಗ್ ಲ್ಯಾಪ್‌ಟಾಪ್ ಕೊಳ್ಳುವಂತಹ ಹಾಸ್ಯಾಸ್ಪದ ಸನ್ನಿವೇಶಗಳನ್ನು ತಪ್ಪಿಸಲು ಈ ಹೆಜ್ಜೆ ಖಂಡಿತಾ ನೆರವಾಗುತ್ತದೆ.

ಲ್ಯಾಪ್‌ಟಾಪಿನ ಗಾತ್ರ ಹಾಗೂ ತೂಕ ಕೂಡ ಮಹತ್ವದ್ದೇ. ಲ್ಯಾಪ್‌ಟಾಪ್ ಪರದೆ (ಸ್ಕ್ರೀನ್) ದೊಡ್ಡದಾದಷ್ಟೂ ಅದರ ಗಾತ್ರ ಕೂಡ ದೊಡ್ಡದಾಗುವುದರಿಂದ ಅದನ್ನು ಕೂಡ ನಮ್ಮ ಅಗತ್ಯಕ್ಕೆ ತಕ್ಕಂತೆಯೇ ಆರಿಸಿಕೊಳ್ಳಬೇಕಾಗುತ್ತದೆ. ಹೆಚ್ಚು ಓಡಾಡಿಸುವ ಅಗತ್ಯವಿಲ್ಲದಿದ್ದರೆ ದೊಡ್ಡ ಪರದೆ, ಮತ್ತು ಹಾಗಾಗಿ ದೊಡ್ಡ ಗಾತ್ರ ಓಕೆ. ಆದರೆ ಲ್ಯಾಪ್‌ಟಾಪಿನ ಜೊತೆಗೇ ಪ್ರಯಾಣಿಸುವವರಿಗೆ ದೊಡ್ಡಗಾತ್ರದ ಲ್ಯಾಪ್‌ಟಾಪ್ ತಲೆನೋವಿನ ಸಂಗತಿ; ಲ್ಯಾಪ್‌ಟಾಪ್ ತೂಕ ಜಾಸ್ತಿಯಿದ್ದರೆ ಅದನ್ನು ಹೊರುವುದು ಬೆನ್ನುನೋವಿನ ಸಂಗತಿಯೂ ಆಗಬಲ್ಲದು! ಹಾಗಾಗಿ ನಮ್ಮ ಅಗತ್ಯಗಳಿಗೆ ಸರಿಯಾಗಿ ಹೊಂದುವ - ತೀರಾ ಸಣ್ಣದೂ ಅಲ್ಲದ, ತೀರಾ ದೊಡ್ಡದೂ ಅಲ್ಲದ - ಗಾತ್ರದ ಲ್ಯಾಪ್‌ಟಾಪ್ ಆರಿಸಿಕೊಳ್ಳುವುದು ಮುಖ್ಯ. ಹೆಚ್ಚು ಪ್ರಯಾಣಿಸುವವರಾದರೆ ಕಡಿಮೆ ತೂಕದ ಹಾಗೂ ಸದೃಢವಾದ ರಚನೆಯಿರುವ ಲ್ಯಾಪ್‌ಟಾಪನ್ನು ಆರಿಸಿಕೊಳ್ಳಬೇಕಾದ್ದೂ ಅನಿವಾರ್ಯ.

ಮನೆ ಅಥವಾ ಕಚೇರಿಯಿಂದ ಹೊರಗೆ ಹೆಚ್ಚುಹೊತ್ತು ಲ್ಯಾಪ್‌ಟಾಪ್ ಬಳಸುವುದಾದರೆ ಅದರ ಬ್ಯಾಟರಿ ಸಾಮರ್ಥ್ಯ ಕೂಡ ಮಹತ್ವಪಡೆದುಕೊಳ್ಳುತ್ತದೆ. ಅಗತ್ಯವಿದ್ದರೆ ಲ್ಯಾಪ್‌ಟಾಪ್ ಕೊಳ್ಳುವಾಗಲೇ ಹೆಚ್ಚು ಸಾಮರ್ಥ್ಯದ ಬ್ಯಾಟರಿ ಇರುವ ಮಾದರಿಯನ್ನು ಆರಿಸಿಕೊಳ್ಳುವುದು ಒಳ್ಳೆಯದು. ನಮ್ಮ ಕಡತಗಳನ್ನೆಲ್ಲ ಉಳಿಸಿಡಲು ಎಷ್ಟು ಹಾರ್ಡ್‌ಡಿಸ್ಕ್ ಸಾಮರ್ಥ್ಯ ಇರಬೇಕು ಎನ್ನುವುದೂ ಮುಖ್ಯ ವಿಷಯವೇ. ಅಲ್ಲದೆ ಡೆಸ್ಕ್‌ಟಾಪ್ ಕಂಪ್ಯೂಟರಿನ ತುಲನೆಯಲ್ಲಿ ಲ್ಯಾಪ್‌ಟಾಪ್ ಕಳುವಾಗುವ ಅಥವಾ ಹಾಳಾಗುವ ಸಾಧ್ಯತೆ ಜಾಸ್ತಿಯಿರುವುದರಿಂದ ನಮ್ಮ ಕಡತಗಳನ್ನು ಪ್ರತಿಮಾಡಿಟ್ಟುಕೊಳ್ಳುವ (ಬ್ಯಾಕಪ್) ಬಗೆಗೂ ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಲ್ಯಾಪ್‌ಟಾಪ್‌ನಲ್ಲಿರುವ ಮಹತ್ವದ ಮಾಹಿತಿಯನ್ನು ಸೂಕ್ತ ಮಾಧ್ಯಮದಲ್ಲಿ ಪ್ರತಿಮಾಡಿಟ್ಟುಕೊಳ್ಳುವುದು ನಿಜಕ್ಕೂ ಒಳ್ಳೆಯ ಅಭ್ಯಾಸ. ಈ ಕೆಲಸಕ್ಕೆ ಡಿವಿಡಿ, ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್ ಇತ್ಯಾದಿಗಳ ಜೊತೆಗೆ ಗೂಗಲ್ ಡ್ರೈವ್, ಡ್ರಾಪ್‌ಬಾಕ್ಸ್ ಮುಂತಾದ ಕ್ಲೌಡ್ ಆಧರಿತ ಆನ್‌ಲೈನ್ ಸೇವೆಗಳನ್ನೂ ಬಳಸಬಹುದು.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

0 ಪ್ರತಿಕ್ರಿಯೆಗಳು:

Post a Comment