ಲ್ಯಾಪ್‌ಟಾಪ್ ಕೊಳ್ಳಲೆಂದು ಮಾರುಕಟ್ಟೆಗೆ ಹೋದರೆ ನಮ್ಮ ಮುಂದೆ ಹತ್ತಾರು ಬಗೆಯ ಲ್ಯಾಪ್‌ಟಾಪ್‌ಗಳು ಕಾಣಿಸಿಕೊಳ್ಳುತ್ತವೆ: ದೊಡ್ಡಗಾತ್ರದ್ದು, ಹೆಚ್ಚು ಸಾಮರ್ಥ್ಯದ್ದು, ಸುಲಭವಾಗಿ ಎತ್ತಿಕೊಂಡು ಓಡಾಡುವಂಥದ್ದು, ತೆಳುವಾದದ್ದು - ಹೀಗೆ. ಇಷ್ಟೆಲ್ಲ ಆಯ್ಕೆಗಳಿರುವಾಗ ಅವುಗಳ ಪೈಕಿ ಒಂದನ್ನು ಆರಿಸಿಕೊಳ್ಳುವುದು ನಿಜಕ್ಕೂ ಕಷ್ಟದ ಕೆಲಸ. ಈ ಕೆಲಸದಲ್ಲಿ ನೆರವಾಗಲು ಲ್ಯಾಪ್‌ಟಾಪ್ ವಿಧಗಳ ಸಣ್ಣದೊಂದು ಪರಿಚಯ ಇಲ್ಲಿದೆ.

ಲ್ಯಾಪ್‌ಟಾಪ್ ಎಂದಾಕ್ಷಣ ನಮ್ಮ ಮನಸ್ಸಿಗೆ ಬರುತ್ತದಲ್ಲ - ಡೆಸ್ಕ್‌ಟಾಪಿನ ಎಲ್ಲ ಕೆಲಸಗಳನ್ನೂ ಮಾಡುವ ಸಣ್ಣಗಾತ್ರದ ಕಂಪ್ಯೂಟರ್ - ಅದು ಲ್ಯಾಪ್‌ಟಾಪ್ ಕಂಪ್ಯೂಟರುಗಳಲ್ಲಿನ ಮೊದಲ ವಿಧ. ಈ ಬಗೆಯ ಲ್ಯಾಪ್‌ಟಾಪ್‌ಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ, ಮತ್ತು ಅವುಗಳ ತೂಕವೂ ಹೆಚ್ಚು. ಆದರೆ ಸಿಡಿ/ಡಿವಿಡಿ ಡ್ರೈವ್ ಮತ್ತು ರೈಟರ್ ಸೇರಿದಂತೆ ಡೆಸ್ಕ್‌ಟಾಪ್ ಕಂಪ್ಯೂಟರುಗಳಲ್ಲಿರುವ ಎಲ್ಲ ಸೌಲಭ್ಯಗಳನ್ನೂ ಒದಗಿಸುತ್ತವೆ. ಪ್ರಾರಂಭಿಕ ಮಾದರಿಗಳಿಗೆ ಸೀಮಿತವಾಗಿ ಹೇಳುವುದಾದರೆ ಈ ಬಗೆಯ ಲ್ಯಾಪ್‌ಟಾಪ್‌ಗಳ ಬೆಲೆಯೂ ಉಳಿದವಕ್ಕಿಂತ ಕೊಂಚ ಕಡಿಮೆಯೇ ಎನ್ನಬಹುದು. ಸಾಂಪ್ರದಾಯಿಕ ಡೆಸ್ಕ್‌ಟಾಪ್ ಮಾದರಿಗಳಿಗೆ ಪರ್ಯಾಯವಾಗುವ ಮಾದರಿಯೇ ಬೇಕು, ತಕ್ಕಮಟ್ಟಿಗೆ ದೊಡ್ಡದಾದ ಪರದೆಯೇ ಇರಬೇಕು ಎಂದೆಲ್ಲ ಅಪೇಕ್ಷಿಸುವವರಿಗೆ ಇದು ಹೇಳಿ ಮಾಡಿಸಿದ ಆಯ್ಕೆ.

ಕಳೆದ ಕೆಲವರ್ಷಗಳಲ್ಲಿ ಕೊಂಚಮಟ್ಟಿಗೆ ಹೆಸರುಮಾಡಿದ್ದ ಇನ್ನೊಂದು ವಿಧ ನೆಟ್‌ಬುಕ್‌ಗಳದ್ದು. ಇವನ್ನು ಪುಟಾಣಿ ಲ್ಯಾಪ್‌ಟಾಪ್‌ಗಳೆಂದೂ ಕರೆಯಬಹುದು.
ಸಾಮಾನ್ಯ ಲ್ಯಾಪ್‌ಟಾಪ್‌ಗಿಂತ ಸಣ್ಣ ಪರದೆ, ಸಿಡಿ/ಡಿವಿಡಿ ಡ್ರೈವ್ ಅನುಪಸ್ಥಿತಿ, ಕೊಂಚ ಕಡಿಮೆ ಸಂಸ್ಕರಣಾ ಸಾಮರ್ಥ್ಯ - ಇವು ನೆಟ್‌ಬುಕ್‌ಗಳ ಮುಖ್ಯ ಲಕ್ಷಣಗಳಲ್ಲಿ ಕೆಲವು. ಇವುಗಳ ತೂಕವಷ್ಟೇ ಅಲ್ಲ, ಬೆಲೆ ಕೂಡ ಕಡಿಮೆಯೇ. ಆದರೆ ಈಚೆಗೆ ಮಾರುಕಟ್ಟೆಗೆ ಬಂದಿರುವ ಹೆಚ್ಚು ಸಾಮರ್ಥ್ಯದ, ಬೇರೆಬೇರೆ ವಿಧದ ಲ್ಯಾಪ್‌ಟಾಪ್‌ಗಳ ನಡುವೆ ನೆಟ್‌ಬುಕ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹಾಗಾಗಿ ನೆಟ್‌ಬುಕ್ ಕೊಳ್ಳಲು ಹೊರಟರೆ ನಮಗೆ ದೊರಕುವ ಆಯ್ಕೆಗಳೂ ಕಡಿಮೆಯೇ.

ಚಿಕ್ಕದಾದ, ಕಡಿಮೆ ತೂಕದ ಲ್ಯಾಪ್‌ಟಾಪ್ ಎಂದಮಾತ್ರಕ್ಕೆ ಅದರ ಸಾಮರ್ಥ್ಯವಾಗಲಿ ಲಭ್ಯವಿರುವ ಸೌಲಭ್ಯಗಳಾಗಲಿ ಕಡಿಮೆಯಾಗಿರಬೇಕಿಲ್ಲ ಎಂದು ತೋರಿಸಿಕೊಟ್ಟದ್ದು ಅಲ್ಟ್ರಾಬುಕ್‌ಗಳ ಸಾಧನೆ. ನೆಟ್‌ಬುಕ್ ಹಾಗೂ ಸಾಮಾನ್ಯ ಲ್ಯಾಪ್‌ಟಾಪ್‌ಗಳ ನಡುವಿನ ಈ ವಿಧವನ್ನು 'ಸಬ್‌ನೋಟ್‌ಬುಕ್' ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಲ್ಯಾಪ್‌ಟಾಪ್‌ಗಳ ನಡುವೆ ಸೈಜ್ ಜೀರೋ ಹೀರೋಯಿನ್‌ಗಳಂತೆ ತೀರಾ ತೆಳ್ಳಗಿರುವ ಅಲ್ಟ್ರಾಬುಕ್‌ಗಳ ಕಾರ್ಯಕ್ಷಮತೆಯೂ ಬಹಳ ಉನ್ನತ ಮಟ್ಟದಲ್ಲಿರುತ್ತದೆ. ಹಾರ್ಡ್‌ಡಿಸ್ಕ್‌ಗಳ ಜೊತೆಗೆ ಸಾಲಿಡ್ ಸ್ಟೇಟ್ ಡ್ರೈವ್‌ಗಳನ್ನು ಬಳಸುವ ಅಲ್ಟ್ರಾಬುಕ್‌ಗಳನ್ನು ಬೂಟ್ ಮಾಡುವುದು ಅಥವಾ ಸ್ಲೀಪ್‌ಮೋಡ್‌ನಿಂದ ವಾಪಸ್ ಕರೆತರುವುದು ಬಹಳ ಕ್ಷಿಪ್ರವಾಗಿ ಆಗುವ ಕೆಲಸ. ಅವುಗಳ ಬ್ಯಾಟರಿಯೂ ಸುದೀರ್ಘ ಅವಧಿಗಳವರೆಗೆ ಬಾಳಿಕೆ ಬರುತ್ತದೆ. ಆದರೆ ಅಲ್ಟ್ರಾಬುಕ್‌ಗಳ ಬೆಲೆ ಮಾತ್ರ ಬೇರೆಯ ಲ್ಯಾಪ್‌ಟಾಪ್‌ಗಳಿಗೆ ಹೋಲಿಸಿದಾಗ ಕೊಂಚ ಹೆಚ್ಚೇ ಎನ್ನಬೇಕು. ಅಂದಹಾಗೆ ನೆಟ್‌ಬುಕ್‌ಗಳಂತೆ ಅಲ್ಟ್ರಾಬುಕ್‌ನಲ್ಲೂ ಸಿಡಿ/ಡಿವಿಡಿ ಡ್ರೈವ್ ಇರುವುದಿಲ್ಲ.

ಮೊಬೈಲ್ ಫೋನಿನಿಂದ ಮೈಕ್ರೋವೇವ್ ಓವನ್‌ವರೆಗೆ ಈಗ ಎಲ್ಲೆಲ್ಲೂ ಟಚ್‌ಸ್ಕ್ರೀನ್‌ನದೇ ಭರಾಟೆ. ಇನ್ನು ಲ್ಯಾಪ್‌ಟಾಪ್‌ಗಳಲ್ಲಿ ಟಚ್‌ಸ್ಕ್ರೀನ್ ಇಲ್ಲದಿದ್ದರೆ ಆದೀತೆ? ಹಾಗಾಗಿಯೇ ಈಗ ಅನೇಕ ಬಗೆಯ ಲ್ಯಾಪ್‌ಟಾಪ್‌ಗಳ ಪರದೆ ಸ್ಪರ್ಶಸಂವೇದಿಯಾಗಿರುತ್ತದೆ. ಅಷ್ಟೇ ಅಲ್ಲ, ಲ್ಯಾಪ್‌ಟಾಪ್‌ಗಳ ಪರದೆಯನ್ನು ಕೀಬೋರ್ಡಿನಿಂದ ಬೇರ್ಪಡಿಸಿ ಟ್ಯಾಬ್ಲೆಟ್ ಕಂಪ್ಯೂಟರಿನಂತೆ ಉಪಯೋಗಿಸಲು ಅನುವುಮಾಡಿಕೊಡುವ 'ಕನ್ವರ್ಟಿಬಲ್'ಗಳೂ ಇದೀಗ ಮಾರುಕಟ್ಟೆಯಲ್ಲಿವೆ. ಪರದೆಯನ್ನು ಪ್ರತ್ಯೇಕಿಸುವುದು ಬೇಡ ಎನ್ನುವುದಾದರೆ ಅದನ್ನು ಕೀಬೋರ್ಡಿನ ಹಿಂಭಾಗಕ್ಕೆ ಬರುವಂತೆ ಮಡಿಚಿಟ್ಟುಕೊಂಡು ಕೆಲಸಮಾಡುವಂತಹ ಮಾದರಿಗಳೂ ಇವೆ.

ಲ್ಯಾಪ್‌ಟಾಪ್‌ಗಳ ಮೇಲೆ ಕ್ಲೌಡ್ ಕಂಪ್ಯೂಟಿಂಗ್ ಪ್ರಭಾವವೂ ಆಗಿದೆ. ಲ್ಯಾಪ್‌ಟಾಪ್‌ನಲ್ಲಿ ಬ್ರೌಸರ್ ತಂತ್ರಾಂಶವನ್ನಷ್ಟೆ ಇಟ್ಟು ನಮಗೆ ಬೇಕಾದ ಇತರ ತಂತ್ರಾಂಶಗಳು, ಅವನ್ನು ಬಳಸಿ ನಾವು ಸಿದ್ಧಪಡಿಸುವ ಮಾಹಿತಿ - ಎಲ್ಲಕ್ಕೂ ವಿಶ್ವವ್ಯಾಪಿ ಜಾಲವನ್ನೇ ಅವಲಂಬಿಸುವ ಕ್ಲೌಡ್ ಆಪರೇಟಿಂಗ್ ಸಿಸ್ಟಂ ಪರಿಕಲ್ಪನೆ ಬಳಸಿಕೊಂಡು ಗೂಗಲ್ ಸಂಸ್ಥೆ 'ಕ್ರೋಮ್‌ಬುಕ್' ಅನ್ನು ಪರಿಚಯಿಸಿದೆ. ಪದಸಂಸ್ಕರಣಾ ತಂತ್ರಾಂಶ ಬಳಸಿ ಅರ್ಜಿ ಟೈಪಿಸಬೇಕಾಗಿರಲಿ, ಸ್ಪ್ರೆಡ್‌ಶೀಟಿನಲ್ಲಿ ಲೆಕ್ಕಾಚಾರ ಹಾಕುವ ಅಗತ್ಯವಿರಲಿ - ಯಾವುದೇ ಪ್ರತ್ಯೇಕ ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳುವ ಅಗತ್ಯವಿಲ್ಲದೆ ಇಲ್ಲಿ ಎಲ್ಲವೂ ವಿಶ್ವವ್ಯಾಪಿ ಜಾಲದ ಮೂಲಕವೇ ಲಭ್ಯ. ಅಷ್ಟೇ ಅಲ್ಲ, ಅವನ್ನೆಲ್ಲ ಬಳಸಿ ನಾವು ಸಿದ್ಧಪಡಿಸಿದ ಮಾಹಿತಿಯೂ ಜಾಲದಲ್ಲೇ ಉಳಿದುಕೊಳ್ಳುತ್ತದೆ; ಹಾಗಾಗಿ ಲ್ಯಾಪ್‌ಟಾಪ್ ಕಳ್ಳತನವಾದರೂ ನಮ್ಮ ಕಡತಗಳು ಕಳೆದುಹೋಗುವ ಭೀತಿಯಿಲ್ಲ!

ಇದಿಷ್ಟು ಲ್ಯಾಪ್‌ಟಾಪ್ ವೈಶಿಷ್ಟ್ಯವನ್ನು ಆಧರಿಸಿದ ವಿಂಗಡಣೆಯಾಯಿತು. ನಾವು ಲ್ಯಾಪ್‌ಟಾಪ್ ಅನ್ನು ಯಾವ ಉದ್ದೇಶಕ್ಕೆ ಬಳಸುತ್ತೇವೆ ಎನ್ನುವುದರ ಆಧಾರದ ಮೇಲೂ ಲ್ಯಾಪ್‌ಟಾಪ್‌ಗಳಲ್ಲಿ ಒಂದಷ್ಟು ವಿಧಗಳಿವೆ. ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಅಪೇಕ್ಷಿಸುವ ಗೇಮಿಂಗ್‌ನಂತಹ ಚಟುವಟಿಕೆಗಳಿಗೆಂದೇ ಭಾರೀ ಸಾಮರ್ಥ್ಯದ - ದುಬಾರಿ ಬೆಲೆಯ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಯಲ್ಲಿ ದೊರಕುತ್ತವೆ.

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

0 ಪ್ರತಿಕ್ರಿಯೆಗಳು:

Post a Comment