ಹಿಂದಿನ ಕಾಲದಲ್ಲಿ ಟೀವಿ ಕೊಳ್ಳುವುದು ಬಹುಶಃ ಕಷ್ಟವಿತ್ತು - ಅಗತ್ಯ ಹಣ ಹೊಂದಿಸುವ ದೃಷ್ಟಿಯಿಂದ. ಆದರೆ ಟೀವಿ ಕೊಳ್ಳಬೇಕು ಎಂದು ತೀರ್ಮಾನಿಸಿಕೊಂಡು ಅಂಗಡಿಗೆ ಹೋದಾಗ ಹೆಚ್ಚಿನ ಗೊಂದಲವೇನೂ ಇರುತ್ತಿರಲಿಲ್ಲ. ಇದ್ದದ್ದೇ ನಾಲ್ಕಾರು ಬ್ರಾಂಡು, ಅವೆಲ್ಲವೂ ಹೆಚ್ಚೂಕಡಿಮೆ ಒಂದೇ ಗಾತ್ರದವು. ಕಲರ್ ಟೀವಿ ಬೇಕೋ ಬ್ಲ್ಯಾಕ್ ಆಂಡ್ ವೈಟ್ ಬೇಕೋ ತೀರ್ಮಾನಿಸಿದರೆ ಕೆಲಸ ಮುಗಿಯುತ್ತಿತ್ತು.

ಆದರೆ ಈಗ? ಟೀವಿ ಬೇಕೆಂದು ಹೊರಟ ತಕ್ಷಣ ನಮ್ಮ ಮುಂದೆ ಅದೆಷ್ಟು ಆಯ್ಕೆಗಳು ಬಂದು ನಿಲ್ಲುತ್ತವೆ! ಎಲ್‌ಸಿಡಿ, ಎಲ್‌ಇಡಿ, ಪ್ಲಾಸ್ಮಾ ಗಲಾಟೆಯಲ್ಲಿ ಹಳೆಯ ಸಿಆರ್‌ಟಿಯನ್ನು ಕೇಳುವವರೇ ಇಲ್ಲ. ಗಾತ್ರದ ವಿಷಯಕ್ಕೆ ಬಂದರೆ ಟೀವಿ ಪರದೆಗಳು ಎಂಬತ್ತು ಇಂಚನ್ನೂ ದಾಟಿ ಬೆಳೆದುಬಿಟ್ಟಿವೆ. ಚಿತ್ರದ ಗುಣಮಟ್ಟದಲ್ಲಿ ಎಚ್‌ಡಿ ರೆಡಿ, ಎಚ್‌ಡಿ ಎಲ್ಲ ಆಗಿ ಈಗ ಆಗಲೇ ಯುಎಚ್‌ಡಿ ಕಾಲ. ವೀಕ್ಷಣೆಯ ಅನುಭವ ಅಸಾಮಾನ್ಯವಾಗಿರಬೇಕು ಎನ್ನುವವರಿಗೆ ಥ್ರೀಡಿ ಟೀವಿಗಳೂ ಇವೆ. ಮೊಬೈಲು-ಕಂಪ್ಯೂಟರುಗಳಿಗಿಂತ ನಾನೇನು ಕಡಿಮೆ ಎಂದು ಟೀವಿಗಳೂ ಸ್ಮಾರ್ಟ್ ಆಗಿದ್ದಂತೂ ಈಗಾಗಲೇ ಹಳೆಯ ವಿಚಾರ.

ಇಷ್ಟೆಲ್ಲ ವೈವಿಧ್ಯವಿರುವ ಟೀವಿ ಮಾರುಕಟ್ಟೆಯಲ್ಲಿ ನಮಗೆ ಬೇಕಾದ್ದನ್ನು ಆರಿಸಿಕೊಳ್ಳಲು ನಾವು ಹಲವು ವಿಷಯಗಳನ್ನು ತಿಳಿದಿರಬೇಕಾಗುತ್ತದೆ. ಆ ಸಾಲಿನಲ್ಲಿ ಮೊದಲನೆಯದಾಗಿ ಎಚ್‌ಡಿ ರೆಡಿ, ಎಚ್‌ಡಿ ಮತ್ತು ಯುಎಚ್‌ಡಿ ಪರಿಕಲ್ಪನೆಗಳ ಪರಿಚಯ ಇಲ್ಲಿದೆ.

***

ಎಲ್‌ಸಿಡಿ, ಎಲ್‌ಇಡಿ, ಪ್ಲಾಸ್ಮಾ - ಯಾವ ಟೀವಿ ಕೊಳ್ಳಲು ಹೋದರೂ ನಮ್ಮನ್ನು ಗೊಂದಲಕ್ಕೀಡುಮಾಡುವ ಒಂದು ಅಂಶ ಎಂದರೆ ಅವುಗಳ ಬೆಲೆಯಲ್ಲಿನ ವ್ಯತ್ಯಾಸ. ಒಂದೇ ಗಾತ್ರದ ಒಂದೇ ರೂಪದ ಎರಡು ಟೀವಿಗಳ ಬೆಲೆಯಲ್ಲಿ ನಾಲ್ಕಾರು ಸಾವಿರ ವ್ಯತ್ಯಾಸ ಯಾಕೆ ಎಂದು ಕೇಳಿದರೆ "ಅದು - ಕಡಿಮೆ ಬೆಲೆಯದ್ದು - ಎಚ್‌ಡಿ ರೆಡಿ ಅಷ್ಟೆ, ಇದು ಫುಲ್ ಎಚ್‌ಡಿ - ಅದಕ್ಕೇ ಕಾಸ್ಟ್ಲಿ" ಎನ್ನುವ ಉತ್ತರ ಕೇಳಸಿಗುತ್ತದೆ.

'ಎಚ್‌ಡಿ' ಎನ್ನುವುದು 'ಹೈ ಡೆಫನಿಷನ್' ಎಂಬ ಹೆಸರಿನ ಹ್ರಸ್ವರೂಪ. ಟೀವಿ, ಕ್ಯಾಮೆರಾ, ಟ್ಯಾಬ್ಲೆಟ್ಟು, ಮೊಬೈಲು ಎಲ್ಲೆಡೆಯೂ ಪ್ರದರ್ಶಿತವಾಗುವ ಅಥವಾ ಸೆರೆಯಾಗುವ ಚಿತ್ರದ ಗುಣಮಟ್ಟದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದದ್ದು ಎಚ್‌ಡಿ ತಂತ್ರಜ್ಞಾನದ ಹಿರಿಮೆ.

ಟೀವಿ ಪರದೆಯ ಮೇಲೆ ಮೂಡಿಬರುವ ಚಿತ್ರ ಎಷ್ಟು ಸ್ಪಷ್ಟವಾಗಿರುತ್ತದೆ ಎನ್ನುವುದನ್ನು ತೀರ್ಮಾನಿಸುವ ಅಂಶಗಳಲ್ಲಿ ಚಿತ್ರ ಎಷ್ಟು ಸಾಲುಗಳಲ್ಲಿ ಮೂಡಿಬರುತ್ತದೆ ಎಂಬ ಅಂಶವೂ ಒಂದು. ಪಿಕ್ಸೆಲ್ ಜಾಸ್ತಿಯಿದ್ದಷ್ಟೂ ಡಿಜಿಟಲ್ ಛಾಯಾಚಿತ್ರದ ಗುಣಮಟ್ಟ (ರೆಸಲ್ಯೂಶನ್) ಹೆಚ್ಚು ಉತ್ತಮವಾಗಿರುತ್ತದಲ್ಲ, ಹಾಗೆಯೇ ಇದೂ ಕೂಡ.

ಇನ್ನೊಂದು ಅಂಶ ಸ್ಕ್ಯಾನ್ ಟೈಪ್. ಸಾಮಾನ್ಯ ಟೀವಿಗಳಲ್ಲಿ ಚಿತ್ರಗಳು ಮೂಡುವಾಗ ಪರದೆಯ ಎಲ್ಲ ಸಾಲುಗಳೂ ಒಮ್ಮೆಗೇ ಬೆಳಗುವುದಿಲ್ಲ. ಪಕ್ಕಪಕ್ಕದ ಸಾಲುಗಳು ಬಹಳ ಕ್ಷಿಪ್ರವಾಗಿ ಒಂದಾದಮೇಲೆ ಮತ್ತೊಂದರಂತೆ ಬೆಳಗುವ ಮೂಲಕ ಟೀವಿ ಪರದೆಯಲ್ಲಿ ಚಿತ್ರಗಳು ಮೂಡುತ್ತವೆ. ಇದಕ್ಕೆ 'ಇಂಟರ್‌ಲೇಸ್ಡ್ ಸ್ಕ್ಯಾನ್' ಎಂದು ಹೆಸರು (ಸಾಲುಗಳು ಪರಸ್ಪರ ಹೆಣೆದುಕೊಳ್ಳುವುದರ ಮೂಲಕ ಚಿತ್ರ ಮೂಡುತ್ತದಲ್ಲ, ಇಂಟರ್‌ಲೇಸ್ ಎಂಬ ಹೆಸರು ಅದನ್ನೇ ಸೂಚಿಸುತ್ತದೆ). ಆದರೆ ಎಚ್‌ಡಿ ಟೀವಿಯಲ್ಲಿ ಹಾಗಲ್ಲ, ಎಲ್ಲ ಸಾಲುಗಳೂ ಒಮ್ಮೆಗೇ ಬೆಳಗಿ ಪರದೆಯ ಮೇಲೆ ಹೆಚ್ಚು ಸ್ಪಷ್ಟವಾದ ಚಿತ್ರಗಳನ್ನು ಮೂಡಿಸುತ್ತವೆ. ಇದಕ್ಕೆ 'ಪ್ರೋಗ್ರೆಸಿವ್ ಸ್ಕ್ಯಾನ್' ಎಂದು ಹೆಸರು.

ಈ ಎರಡೂ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಯಾವುದನ್ನು ಎಚ್‌ಡಿ ಟೀವಿ ಎಂದು ಕರೆಯಬೇಕು ಎನ್ನುವ ಬಗ್ಗೆ ಕೆಲ ಮಾನದಂಡಗಳಿವೆ. ಅವುಗಳ ಪ್ರಕಾರ ಕನಿಷ್ಟ ೭೨೦ ಸಾಲುಗಳ ರೆಸಲ್ಯೂಶನ್ ಹಾಗೂ ಪ್ರೋಗ್ರೆಸಿವ್ ಸ್ಕ್ಯಾನ್ ಸಾಮರ್ಥ್ಯ ಹೊಂದಿರುವ ಟೀವಿಗಳು 'ಎಚ್‌ಡಿ ರೆಡಿ' ಎನಿಸಿಕೊಳ್ಳುತ್ತವೆ; ಕನಿಷ್ಠ ೧೦೮೦ ಸಾಲುಗಳ ರೆಸಲ್ಯೂಶನ್ ಇರುವವು 'ಫುಲ್ ಎಚ್‌ಡಿ' ವಿಶೇಷಣ ಪಡೆದುಕೊಳ್ಳುತ್ತವೆ.

ಅಂದರೆ, ಫುಲ್ ಎಚ್‌ಡಿ ಟೀವಿಗಳಲ್ಲಿ ಮೂಡಿಬರುವ ಚಿತ್ರದ ಗುಣಮಟ್ಟ ಎಚ್‌ಡಿ ರೆಡಿ ಟೀವಿಗಳಲ್ಲಿ ಮೂಡಿಬರುವುದಕ್ಕಿಂತ ಹೆಚ್ಚು ಉತ್ತಮವಾಗಿರುತ್ತದೆ. ಸಾಮಾನ್ಯ ಕೇಬಲ್ ಸಂಪರ್ಕ ಬಳಸುವಾಗ ಈ ವ್ಯತ್ಯಾಸ ಹೆಚ್ಚಾಗಿ ಕಾಣುವುದಿಲ್ಲವಾದರೂ ಉತ್ತಮ ಗುಣಮಟ್ಟದ ವೀಡಿಯೋಗಳನ್ನು  ನೋಡುವುದಕ್ಕೆ (ಉದಾ: ಬ್ಲೂ ರೇ ಡಿಸ್ಕಿನ ಸಿನಿಮಾ, ಎಚ್‌ಡಿ ಚಾನೆಲ್ ಪ್ರಸಾರ) ಫುಲ್ ಎಚ್‌ಡಿ ಟೀವಿಗಳೇ ಹೆಚ್ಚು ಸೂಕ್ತ.

ಫುಲ್ ಎಚ್‌ಡಿಯೇ ಇಷ್ಟು ಚೆನ್ನಾಗಿರುತ್ತದೆ ಎನ್ನುವಾಗ ಅದರ ಎರಡರಷ್ಟು ರೆಸಲ್ಯೂಶನ್ ಇರುವ ಟೀವಿ ಪರದೆಯಲ್ಲಿ ಇನ್ನೆಷ್ಟು ಚೆಂದದ ಚಿತ್ರಗಳು ಮೂಡಿಬರಬಹುದು? ಅದನ್ನು ಅನುಭವಿಸಿಯೇ ನೋಡಬೇಕು ಎನ್ನುವವರಿಗೆಯೇ ಯುಎಚ್‌ಡಿ, ಅಂದರೆ ಅಲ್ಟ್ರಾ ಹೈ ಡೆಫನಿಶನ್ ಟೀವಿಗಳು ಮಾರುಕಟ್ಟೆಗೆ ಬಂದಿವೆ. ಇಂತಹ ಟೀವಿಗಳ ರೆಸಲ್ಯೂಶನ್‌ನಲ್ಲಿ ಎರಡು ವಿಧ - ಈ ಪೈಕಿ ೨೧೬೦ ಸಾಲುಗಳ ರೆಸಲ್ಯೂಶನ್ ಅನ್ನು ೪ಕೆ ಎಂದೂ, ಅದರ ದುಪ್ಪಟ್ಟು - ಅಂದರೆ ೪೩೨೦ ಸಾಲುಗಳ ರೆಸಲ್ಯೂಶನ್ ಅನ್ನು ೮ಕೆ ಎಂದೂ ಗುರುತಿಸಲಾಗುತ್ತದೆ.

ಅಲ್ಟ್ರಾ ಹೈ ಡೆಫನಿಶನ್ ಟೀವಿಗಳಲ್ಲಿ ಚಿತ್ರಗಳು ಅದ್ಭುತವಾಗಿ ಮೂಡಿಬರುತ್ತವೆ ಎನ್ನುವುದು ನಿಜವೇ ಆದರೂ ಇಷ್ಟೆಲ್ಲ ಉತ್ತಮ ಪರದೆಯಲ್ಲಿ ಚೆನ್ನಾಗಿ ಕಾಣಲು ಮೂಲ ಚಿತ್ರದ ಗುಣಮಟ್ಟವೂ ಚೆನ್ನಾಗಿರಬೇಕಾಗುತ್ತದೆ (೪ಕೆ ರೆಸಲ್ಯೂಶನ್ ಇರುವ ವೀಡಿಯೋಗಳು ಈಗಾಗಲೇ ಅನೇಕ ಕಡೆ ಕಾಣಿಸಿಕೊಳ್ಳುತ್ತಿವೆ). ಇನ್ನು ಗ್ರಾಹಕರ ದೃಷ್ಟಿಯಿಂದ ನೋಡಿದರೆ ಸದ್ಯಕ್ಕೆ ಯುಎಚ್‌ಡಿ ಟೀವಿಗಳ ಬೆಲೆ ಕೊಂಚ ಹೆಚ್ಚೇ ಎನಿಸುವಷ್ಟು ದುಬಾರಿ. ಅಲ್ಲದೆ ಇವು ಸಣ್ಣ ಗಾತ್ರಗಳಲ್ಲಿ ದೊರಕುವುದೂ ಇಲ್ಲ.

***

ಇದಿಷ್ಟು ಟೀವಿಯಲ್ಲಿ ಕಾಣುವ ಚಿತ್ರದ ಗುಣಮಟ್ಟದ ವಿಷಯವಾಯಿತು. ಟೀವಿ ಆಯ್ಕೆಯಲ್ಲಿ ನೆರವಾಗುವ ಇನ್ನಷ್ಟು ವಿಷಯಗಳ ಪರಿಚಯ, ಮುಂದಿನವಾರ!

--------------------------- ಜಾಹೀರಾತು ---------------------------
ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬೇಕೆ? ನಿಮಗೆ ಬೇಕಾದ್ದನ್ನು ಇಲ್ಲಿ ಹುಡುಕಿ!

1 ಪ್ರತಿಕ್ರಿಯೆಗಳು:

  1. Uttamavada lekhana..
    my web site :https://www.firstnewsdesk.com/

    ReplyDelete